ರಾಜ್ಯ

ಈಶ್ವರಪ್ಪ ಹೇಳಿಕೆ ವಿರೋಧಿಸಿ ಶಿವಮೊಗ್ಗ ಡಿಸಿ ಕಚೇರಿ ಮೇಲೆ ಆಜಾನ್ ಕೂಗಿದ ವ್ಯಕ್ತಿ, ವಿಧಾನಸೌಧದಲ್ಲೂ ಕೂಗುತ್ತೇವೆ ಎಂದು ಎಚ್ಚರಿಕೆ!

Srinivasamurthy VN

ಶಿವಮೊಗ್ಗ: ವ್ಯಕ್ತಿಯೋರ್ವ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಜಾನ್ ಕೂಗಿದ್ದು, ವಿಧಾನಸೌಧದಲ್ಲೂ ಕೂಗುತ್ತೇವೆ ಎಂದು ಎಚ್ಚರಿಕೆ ನೀಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಜಾನ್ ಕುರಿತ ಹೇಳಿಕೆ ವಿರೋಧಿಸಿ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕೆಲ ಯುವಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ರಾಗಿಗುಡ್ಡದ ನಿವಾಸಿ ಮೌಸೀನ್ ಎಂಬಾತ ಕಚೇರಿ ಮೇಲೆ ನಿಂತು ಆಜಾನ್ ಕೂಗಿದ್ದ. ಅಲ್ಲದೆ ವಿಧಾನಸೌಧದಲ್ಲೂ ಆಜಾನ್ ಕೂಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದ್ದ. ಈ ವೇಳೆ ಆಜಾನ್ ಕೂಗಿ ಉದ್ಧಟತನ ತೋರಿದ ಯುವಕನಿಗೆ ಮುಸ್ಲಿಂ ಮುಖಂಡರು ಯುವಕನಿಗೆ ಬೈದು ಬುದ್ಧಿ ಹೇಳಿದ್ದರು.

ಘಟನೆಗೆ ಸಂಬಂಧಿಸಿದಂತೆ ಆಜಾನ್ ಕೂಗುವುದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೌಸಿನ್‍ನನ್ನು ಜಯನಗರ ಠಾಣೆಗೆ ಕರೆತಂದು ಪೊಲೀಸರು ಎಚ್ಚರಿಕೆ ನೀಡಿ ಸಿಆರ್‌ಪಿಸಿ 107 ಅಡಿ ಪ್ರಕರಣ ದಾಖಲಾಸಿದ್ದಾರೆ. ಅದಾದ ಬಳಿಕ ಠಾಣಾ ಜಾಮೀನಿನ ಮೇಲೆ ಮೌಸಿನ್‍ನನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. 

ಮೌಸೀನ್ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಆಜಾನ್ ಕೂಗಿದಂತ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಆತನನ್ನು ಜಯನಗರ ಪೊಲೀಸರು ಬಂಧಿಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಜಯನಗರ ಠಾಣೆಗೆ ತೆರಳಿದ್ದಂತ ಆತನ ಪರ ವಕೀಲರು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿದ್ದರು. ಈ ಬಳಿಕ ಮಾತನಾಡಿದಂತ ಮೌಸೀನ್ ಪರ ವಕೀಲರು, ಆತನಿಗೆ ಶಾಂತಿಯ ವಾತಾವರಣ ಕದಡಂತೆ ಬುದ್ಧಿ ಹೇಳುತ್ತೇನೆ. ಮುಂದೆ ಹೀಗೆ ಮಾಡದಂತೆ ಎಚ್ಚರಿಸೋದಾಗಿ ತಿಳಿಸಿದರು.

ಏನಿದು ಘಟನೆ?: 
ಕೆಲ ದಿನಗಳ ಹಿಂದೆ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡುತ್ತಿದ್ದ ವೇಳೆಯಲ್ಲೇ ಆಜಾನ್ ಕೂಗಲಾಗಿತ್ತು. ನೋಡಿ ಅಲ್ಲಾನಿಗೆ ಕಿವಿ ಕೇಳಿಸೋದಿಲ್ಲವೇನೋ ಅದಕ್ಕೆ ಹೀಗೆ ಧ್ವನಿ ವರ್ಧಕ ಬಳಸಿ ಆಜಾನ್ ಕೂಗುತ್ತಾರೆ ಎಂಬುದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಇಂದು ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿದಂತಹ ಯುವಕನನ್ನು ಬಂಧಿಸಿ, ಜಾಮೀನು ಮೇಲೆ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. 
 

SCROLL FOR NEXT