ರಾಜ್ಯ

ಬೆಣ್ಣೆ ನಗರಿ ದಾವಣಗೆರೆಯಲ್ಲಿಂದು ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ: ಮೋದಿ ರೋಡ್ ಶೋಗೆ ಬಿಜೆಪಿ ಭರ್ಜರಿ ಸಿದ್ಧತೆ

Manjula VN

ದಾವಣಗೆರೆ: ಮಧ್ಯ ಕರ್ನಾಟಕದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಹಾಸಂಗಮ ಸಮಾವೇಶಕ್ಕೆ ಮಾ.25ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಭರ್ಜರಿ ಸಿದ್ಧತೆಗಳನ್ನು ಮಾಡಿದೆ.

ರಾಜ್ಯದ ನಾಲ್ಕೂ ಕಡೆಯಿಂದ 224 ಕ್ಷೇತ್ರ ಸುತ್ತಾಡಿದ್ದ ವಿಜಯ ಸಂಕಲ್ಪ ಯಾತ್ರೆ ದಾವಣಗೆರೆ ತಲುಪಿದ್ದು, ಮಾರ್ಚ್.25 ರಂದು ಇಲ್ಲಿನ ಹಳೆ ಪಿಬಿ ರಸ್ತೆಯಲ್ಲಿ ಜಿಎಂಐಟಿ ಕಾಲೇಜು ಪಕ್ಕದ ಸುಮಾರು 400 ಎಕರೆ ಪ್ರದೇಶ ವಿಸ್ತಾಪದ ಪ್ರದೇಶದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಮಹಾ ಸಂಗಮವಾಗಲಿವೆ.

ಮಹಾ ಸಂಗಮ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮಧ್ಯಾಹ್ನ 2.45ರ ಹೊತ್ತಿಗೆ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ನಲ್ಲಿ ಜಿಎಂಐಟಿ ಹೆಲಿಪ್ಯಾಡ್'ಗೆ ಬಂದಿಳಿಯಲಿದ್ದಾರೆ. ಸಮಾವೇಶಕ್ಕಾಗಿ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಇದೀಗ ಮೋದಿ ಆಗಮನ, ಪೆಂಡಾಲ್ ನೊಳಗೆ ತೆರೆದ ಜೀಪ್ ನಲ್ಲಿ ಪುಷ್ಟವೃಷ್ಟಿಯಲ್ಲಿ ಮೋದಿಗೆ ಸ್ವಾಗತ ಕೋರಲು ಜನರು ಕಾತುರರಾಗಿದ್ದಾರೆ.

ಸಮಾವೇಶ ಸ್ಥಳದ ಪೆಂಡಾಲ್ ಒಳಗೆಯೇ ಸುಮಾರು ಅರ್ಧ ಕಿ.ಮೀನಷ್ಟು ಪ್ರಧಾನಿ ಮೋದಿ ತೆರೆದ ಜೀಪ್ ನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದಕ್ಕಾಗಿ ಸಂಘಟಕರು ವಿಶೇಷ ಅಂಕುಡೊಂಕಾದ ಮಾರ್ಗವನ್ನು ರಚನೆ ಮಾಡಿದ್ದಾರೆ.

ಸಂಘಟಕರು 1,000 ಅಡಿ ಉದ್ದ ಮತ್ತು 420 ಅಡಿ ಅಗಲದ ವೇದಿಕೆಯನ್ನು ಸ್ಥಾಪಿಸಿದ್ದು, ಮುಖ್ಯ ವೇದಿಕೆಯಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವರು ಸೇರಿದಂತೆ 100 ಮಂದಿಯೊಂದಿಗೆ ಮೋದಿ ಕುಳಿತುಕೊಳ್ಳಲಿದ್ದಾರೆ, ಇನ್ನೆರಡು ವೇದಿಕೆಗಳಲ್ಲಿ ಇತರೆ ಚುನಾಯಿತ ಪ್ರತಿನಿಧಿಗಳು ಕುಳಿತುಕೊಳ್ಳಲಿದ್ದಾರೆ.

ಕಾರ್ಯಕ್ರಮಕ್ಕೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಹಾವೇರಿ, ಬಳ್ಳಾರಿ, ಗದಗ, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಿಂದ 10 ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆ ಇದೆ.

ಸಾವಿರ ಅಡುಗೆಯವರು ಬೆಳಗಿನ ಉಪಾಹಾರಕ್ಕೆ ಉಪ್ಪಿಟ್ಟು ಮತ್ತು ಕೇಸರಿ ಬಾತ್ ಮತ್ತು ಮಧ್ಯಾಹ್ನದ ಊಟಕ್ಕೆ ಪುಲಾವ್, ಮೊಸರು ಮತ್ತು ಗೋಧಿ ಹುಗ್ಗಿ ತಯಾರಿಸುತ್ತಿದ್ದಾರೆ. ಒಟ್ಟು 400 ಎಕರೆ ಪ್ರದೇಶದಲ್ಲಿ ಆಹಾರ ವಿತರಿಸಲು 400 ಕೌಂಟರ್‌ಗಳನ್ನು ತೆರೆಯಲಾಗಿದೆ.

SCROLL FOR NEXT