ರಾಜ್ಯ

ಬೆಂಗಳೂರು: ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2 ರಲ್ಲಿ ಮಳೆ ನೀರು ಸೋರಿಕೆ!

Manjula VN

ಬೆಂಗಳೂರು: ಕಳೆದ ವರ್ಷ ನವೆಂಬರ್‌ ತಿಂಗಳಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದ್ದ ಬೆಂಗಳೂರು ವಿಮಾನ ನಿಲ್ದಾಣದ 5,000 ಕೋಟಿ ರೂಪಾಯಿ ವೆಚ್ಚದ ಟರ್ಮಿನಲ್ 2ನಲ್ಲಿ ಮಳೆ ನೀರು ಸೋರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ.

ಟರ್ಮಿನಲ್‌ 2 ಆಗಮನದ ಸ್ಥಳದಲ್ಲಿ ಮಳೆನೀರು ನಿಲ್ಲುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ನೆಟಿಜನ್‌ಗಳು ರೂ 5,000 ಕೋಟಿ ಟರ್ಮಿನಲ್‌ನ "ನೈಜ ಮೌಲ್ಯ" ಕಾಣುತ್ತಿದೆ ಎಂದು ಟೀಕೆ ಮಾಡಿದ್ದಾರೆ.

ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಹೀಗೆ ಟರ್ಮಿನಲ್‌ನಲ್ಲಿ ನೀರು ತುಂಬಿಕೊಂಡಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸ ಟರ್ಮಿನಲ್‌ನ ಕರ್ಬ್‌ಸೈಡ್‌ನಲ್ಲಿ ಸೋರಿಕೆಯಾಗಿರುವುದನ್ನು ವಿಮಾನ ನಿಲ್ದಾಣದ ನಿರ್ವಾಹಕರಾದ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಖಚಿತಪಡಿಸಿದೆ. ಜೊತೆಗೆ ಎರಡೂ ಟರ್ಮಿನಲ್‌ಗಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದೆ.

"ಮೇ 2, 2023 ರ ಸಂಜೆ ಸುರಿದ ಮಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ರ ಕೆರ್ಬ್‌ಸೈಡ್‌ನಲ್ಲಿ ಸೋರಿಕೆ ಉಂಟಾಗಿದೆ. ಟಿ2 ನಂತಹ ದೊಡ್ಡ ಮತ್ತು ಹೊಸ ಮೂಲಸೌಕರ್ಯದಲ್ಲಿ ಸಮಸ್ಯೆಗಳನ್ನು ನಾವು ಎದುರಿಸುತ್ತಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ತಂಡಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ, ನಮ್ಮ ಎರಡೂ ಟರ್ಮಿನಲ್‌ಗಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ" ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.

SCROLL FOR NEXT