ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಮತದಾರರ ಮೇಲೆ ಕಣ್ಣಿಟ್ಟಿರುವ ಭಾರತೀಯ ಜನತಾ ಪಕ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ನಾಳೆ ಮತ್ತು ನಾಡಿದ್ದು ವಾರಾಂತ್ಯ ಎರಡು ದಿನ ರೋಡ್ ಶೋ ಆಯೋಜಿಸಿದೆ. ಈ ಸಂದರ್ಭದಲ್ಲಿ ಸಂಚಾರದಲ್ಲಿ ಹಲವು ಬದಲಾವಣೆ ಮಾಡಲಾಗಿದೆ.
ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಮತ ಬೇಟೆಗಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಶನಿವಾರ ಮತ್ತು ಭಾನುವಾರ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ನೀಟ್ ಪರೀಕ್ಷೆ ಹಿನ್ನಲೆಯಲ್ಲಿ ಪ್ರಧಾನಿ ರೋಡ್ ಶೋನಲ್ಲಿ ಕೆಲವೊಂದು ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ.
ಆರಂಭದಲ್ಲಿ ಶನಿವಾರ ಒಂದೇ ದಿನ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಆದರೆ ಜನರಿಗೆ ಸಮಸ್ಯೆ ಆಗುತ್ತಿರುವ ಹಿನ್ನಲೆಯಲ್ಲಿ ಎರಡು ದಿನಗಳಲ್ಲಿ ರೋಡ್ ಶೋ ಹಮ್ಮಿಕೊಳ್ಳಲು ನಿರ್ಧಾರ ಮಾಡಲಾಗಿದೆ. ನೀಟ್ ಪರೀಕ್ಷೆ ಹಿನ್ನಲೆಯಲ್ಲಿ ಮೋದಿ ರೋಡ್ ಶೋ ಕಾರ್ಯಕ್ರಮದ ಸಮಯ ಮತ್ತು ದೂರದಲ್ಲಿ ಕಡಿತ ಮಾಡಲಾಗಿದೆ.
ಪ್ರಧಾನಿ ರೋಡ್ ಶೋದಲ್ಲಿ ಮತ್ತೆ ಬದಲಾವಣೆ
ರೋಡ್ ಶೋ ನಿಗದಿಯಾದ ರೂಟ್ ಗಳ ದಿನಾಂಕವನ್ನು ಅದಲು ಬದಲು ಮಾಡಲಾಗಿದೆ. ಶನಿವಾರ ಮತ್ತು ಭಾನುವಾರಗಳ ರೋಡ್ ಶೋಗಳಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಮೋದಿ ರೋಡ್ ಶೋ ಸಾಗುವ ಸಮಯವನ್ನು ಕಡಿತಗೊಳಿಸಲಾಗಿದ್ದು, ನಗರದ ಕೆಲವು ಕ್ಷೇತ್ರದಲ್ಲಿ ಭಾನುವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋವನ್ನು ಶನಿವಾರಕ್ಕೆ ಶಿಫ್ಟ್ ಮಾಡಲಾಗಿದೆ. ಶನಿವಾರ ಬೆಳಗ್ಗೆ ನಿಗದಿಯಾಗಿದ್ದ ರೋಡ್ ಶೋ ಭಾನುವಾರಕ್ಕೆ ಶಿಫ್ಟ್ ಮಾಡಲಾಗಿದೆ. ಶನಿವಾರ ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ ರೋಡ್ ಶೋ ನಡೆಯಲಿದೆ. ಶನಿವಾರ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಮಲ್ಲೇಶ್ವರಂ ಸರ್ಕಲ್ ಮಾರಮ್ಮ ಟೆಂಪಲ್ ವರೆಗೆ ರೋಡ್ ಶೋ ನಡೆಯಲಿದೆ.
ಇನ್ನು ಭಾನುವಾರ ಬೆಳಗ್ಗೆ 10 ಗಂಟೆಯಿಂದ 11.30 ರವರೆಗೆ ರೋಡ್ ಶೋ ನಡೆಯಲಿದೆ. ಭಾನುವಾರ ಸುರಂಜನ್ ದಾಸ್ ಸರ್ಕಲ್ ನಿಂದ ಟ್ರಿನಿಟಿ ಸರ್ಕಲ್ ವರೆಗೆ ರೋಡ್ ಶೋ ಹಮ್ಮಿಕೊಳ್ಳಲಾಗಿದೆ. ಜತೆಗೆ ಭಾನುವಾರ ನಡೆಯುವ ರೋಡ್ ಶೋದಲ್ಲಿ 4 ಕಿ.ಮೀ. ಕಡಿತಗೊಳಿಸಲು ನಿರ್ಧಾರ ಮಾಡಲಾಗಿದೆ. ನೀಟ್ ಪರೀಕ್ಷೆ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿ ನಿರ್ದೇಶನದಂತೆ ರೋಡ್ ಶೋ ಬದಲಾವಣೆ ಮಾಡಿಕೊಳ್ಳಲಾಗಿದೆ.
ವಿದ್ಯಾರ್ಥಿಗಳಿಗಾಗಿ ಮೋದಿ ರೋಡ್ ಶೋ ಬದಲಾವಣೆ: ಶೋಭಾ ಕರಂದ್ಲಾಜೆ
ಇನ್ನು ಮೋದಿ ರೋಡ್ ಶೋ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪ್ರಧಾನಿ ಮೋದಿಯವರಿಗೆ ವಿದ್ಯಾರ್ಥಿಗಳ ಮೇಲೆ ವಿಶೇಷ ಕಾಳಜಿ ಇದೆ. ಮಕ್ಕಳ ಭವಿಷ್ಯ ಬರೆಯುವ ಪರೀಕ್ಷೆ ನೀಟ್. ಹಾಗಾಗಿ ಪ್ರಧಾನಿ ಅಪೇಕ್ಷೆಯಂತೆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.
ಶನಿವಾರ ಮತ್ತು ಭಾನುವಾರರದ ಕಾರ್ಯಕ್ರಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ 26.5 ಕಿ.ಮೀ ರೋಡ್ ಶೋ ಇರುತ್ತೆ. ಭಾನುವಾರ ಚಿಕ್ಕ ಅವಧಿಯ ರೋಡ್ ಶೋ ಇರುತ್ತದೆ. ಇದರಿಂದ ಯಾವುದೇ ಮಕ್ಕಳಿಗೆ ಸಮಸ್ಯೆ ಆಗದಂತೆ ನೋಡಿಕೊಂಡಿದ್ದೇವೆ. ಭಾನುವಾರ ರೋಡ್ ಶೋ ರೂಟ್ ನಲ್ಲಿ ಕಡಿಮೆ ಪರೀಕ್ಷಾ ಕೇಂದ್ರಗಳಿವೆ. ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿದರೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಹೋಗಲು ಅವಕಾಶ ಕೊಡ್ತಾರೆ. ಪೊಲೀಸರಿಗೆ ಸಹಕರಿಸುವಂತೆ ಸೂಚನೆ ಕೊಡಲಾಗಿದೆ ಎಂದರು.
ಪ್ರಧಾನಿಗಳ ರೋಡ್ ಶೋ ವೇಳೆ ಯಾವುದೇ ಅಡೆತಡೆಯಿಲ್ಲದೆ ರೋಗಿಗಳನ್ನು ಆಂಬ್ಯುಲೆನ್ಸ್ ನಲ್ಲಿ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗಳನ್ನು ತಲುಪುವಂತೆ ನಾವು ಪೊಲೀಸರಿಗೆ ವಿನಂತಿಸಿದ್ದೇವೆ, ಈ ನಿಟ್ಟಿನಲ್ಲಿ ನಾವು ಎಸ್‌ಪಿಜಿಯೊಂದಿಗೆ ಚರ್ಚಿಸಿದ್ದೇವೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.
ಸಂಚಾರ ದಟ್ಟಣೆ; ಮಾರ್ಗ ಬದಲಾವಣೆ:
ಮೇ 6ರಂದು 10 ಕಿ.ಮೀ ರೋಡ್ ಶೋ ನಡೆಸುವುದಾಗಿ ಹೇಳಿದ್ದೆವು, ಮೇ 7ರಂದು 26 ಕಿ.ಮೀ ರೋಡ್ ಶೋ ನಿಗದಿಯಾಗಿದ್ದು, ಅದನ್ನೀಗ ಬದಲಾವಣೆ ಮಾಡಲಾಗಿದ್ದು, ನಾಳೆ ಮೇ 6 ರಂದು ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್‌ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್‌ಗೆ ಬೆಳಿಗ್ಗೆ 10 ರಿಂದ 1 ರ ನಡುವೆ 26 ಕಿ.ಮೀ ದೂರವನ್ನು ಪ್ರಧಾನಿ ಮೋದಿ ಕ್ರಮಿಸಲಿದ್ದಾರೆ. ಭಾನುವಾರ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆ ನಡುವೆ ಟ್ರಿನಿಟಿ ವೃತ್ತದಿಂದ 10 ಕಿಲೋಮೀಟರ್ ದೂರದವರೆಗೆ ರೋಡ್ ಶೋ ಬೆಳಗ್ಗೆ 10 ರಿಂದ 11.30ರವರೆಗೆ ನಡೆಯಲಿದೆ.
ಭಾನುವಾರ ರೋಡ್‌ಶೋ ನಡೆಯುವ ಪ್ರದೇಶದಲ್ಲಿ ಹೆಚ್ಚಿನ ಪರೀಕ್ಷಾ ಕೇಂದ್ರಗಳಿಲ್ಲ, ರೋಡ್ ಶೋ ನಡೆಯುವ ಸ್ಥಳದಲ್ಲಿ ಯಾರಾದರೂ ವಿದ್ಯಾರ್ಥಿಗಳು ಬಂದರೆ, ಅವರ ಹಾಲ್ ಟಿಕೆಟ್‌ಗಳನ್ನು ತೋರಿಸಿದರೆ, ಅವರು ಪರೀಕ್ಷೆಗೆ ತಲುಪುವಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ.