ರಾಜ್ಯ

ಮಲ್ಲಿಕಾರ್ಜುನ ಖರ್ಗೆ, ಹೆಂಡತಿ ಮಕ್ಕಳ ಹತ್ಯೆಗೆ ಬಿಜೆಪಿ ಸಂಚು: ಸುರ್ಜೇವಾಲಾ ಗಂಭೀರ ಆರೋಪ

Manjula VN

ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಕುಟುಂಬಸ್ಥರ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶನಿವಾರ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುರ್ಜೇವಾಲಾ ಅವರು,''ಹತ್ಯೆಗೆ ಸಂಚು ನಡೆದಿದ್ದರೂ ಮೋದಿ ಹಾಗೂ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬೆಂಬಲ ತೋರುತ್ತಿರುವುದರಿಂದ ಕಂಗೆಟ್ಟಿರುವ ಬಿಜೆಪಿ ಮಲ್ಲಿಕಾರ್ಜುನ ಖರ್ಗೆ, ಅವರ ಕುಟುಂಬಸ್ಥರ ಹತ್ಯೆಗೆ ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಮೋದಿ ಹಾಗೂ ಸಿಎಂ ಬೊಮ್ಮಾಯಿ ಅವರ ಆತ್ಮೀಯ ನೀಲಿ ಕಂಗಳ ಹುಡುಗ ಹಾಗೂ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರ ಆಡಿಯೋದಲ್ಲಿ ಈ ಸಂಚು ಸ್ಪಷ್ಟವಾಗಿದೆ'.

'ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕತ್ವಕ್ಕೆ ಸಂಬಂಧಿಸಿದಂತೆ ಬಿಜೆಪಿ ಕನ್ನಡನಾಡಿನ ಮಗ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ದ್ವೇಷ ಕಾರುತ್ತಲೆ ಬಂದಿದೆ. ಖರ್ಗೆ ಅವರು ದಲಿತ ಹಾಗೂ ಕಾರ್ಮಿಕ ಕುಟುಂಬದಲ್ಲಿ ಜನಿಸಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೆ ಬೆಳೆದು ಬಂದಿರುವುದನ್ನು ಅರಗಿಸಿಕೊಳ್ಳಲಾಗದ ಬಿಜೆಪಿ ಖರ್ಗೆ ಅವರ ವಿರುದ್ಧ ಸಂಚು ರೂಪಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಚಾರದ ಬಗ್ಗೆ "ಪ್ರಧಾನಿ ಮೌನವಾಗಿರುತ್ತಾರೆ ಎಂಬುದು ನನಗೆ ಗೊತ್ತಿದೆ. ಇದೇ ರೀತಿಯಲ್ಲಿಯೇ ಪೊಲೀಸರು ಹಾಗೂ ಚುನಾವಣಾ ಆಯೋಗ ಕೂಡ ವರ್ತಿಸುತ್ತಿದೆ ಎಂಬುದೂ ತಿಳಿದಿದೆ. ಆದರೆ ಕರ್ನಾಟಕದ ಜನರು ಮೌನವಾಗಿರುವುದಿಲ್ಲ. ಇದಕ್ಕೆ ತಕ್ಕ ಉತ್ತರವನ್ನು ನೀಡಲಿದ್ದಾರೆಂದು ಹೇಳಿದರು.

ಚಿತ್ತಾಪುರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಮಣಿಕಾಂತ್ ರಾಥೋಡ್ ಅವರನ್ನು ನವೆಂಬರ್ 13, 2022 ರಂದು ಬಂಧಿಸಲಾಯಿತು ಮತ್ತು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಬಳಿಕ ಸುದ್ದಿಗೋಷ್ಟಿ ನಡೆಸಿದ್ದ ರಾಥೋಡ್, ಪ್ರಿಯಾಂಕ್ ಖರ್ಗೆಯವರನ್ನು ಹೊಡೆದುರುಳಿಸಲು ಸಿದ್ಧ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು.

"ಮೇ 2 ರಂದು, ಬಿಜೆಪಿ ಶಾಸಕ ಮತ್ತು ಆ ಪಕ್ಷದ ಪ್ರಧಾನ ಕಾರ್ಯದರ್ಶಿ, ಮದನ್ ದಿಲಾವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ "ಸಾವು" ಬಯಸಿದ್ದರು. ಇದೀಗ ಬಿಜೆಪಿ ಖರ್ಗೆಯವರ ಹತ್ಯಗೆ ಸಂಚು ರೂಪಿಸುತ್ತಿದೆ.

ಚುನಾವಣೆ ಸೋಲುವ ಹತಾಷೆಯಲ್ಲಿ ಬಿಜೆಪಿ ಹಾಗೂ ಅದರ ನಾಯಕರು ಅತ್ಯಂತ ಭಯಾನಕ ಹಂತಕ್ಕೆ ತಲುಪಿದ್ದಾರೆ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ರೂಪಿಸಿರುವ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡದೆ, ತಮ್ಮ ಶೇ.40 ಕಮಿಷನ್ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪ್ರತಿನಿತ್ಯ ಭಾವನಾತ್ಮಕ ವಿಚಾರದ ಬಗ್ಗೆ ಮಾತನಾಡಿ ಸಮಾಜ ಒಡೆಯುವ ಪ್ರಯತ್ನಕ್ಕೆ ಮುಂದಾಗಿದೆ. ಈ ಕುತಂತ್ರದಲ್ಲೂ ಯಶಸ್ಸು ಕಾಣದೆ ಕುಸಿಯುತ್ತಿರುವ ಬಿಜೆಪಿ ಈಗ ತಮ್ಮ ಬತ್ತಳಿಕೆಯಿಂದ ಹತ್ಯೆ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ ಎಂದು ತಿಳಿಸಿದ್ದಾರೆ.

ಬಸವಣ್ಣನ ನಾಡು ಸಾಮರಸ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಕನ್ನಡ ನಾಡಿನ ಈ ಪರಂಪರೆಯ ಮೇಲೆ ಈಗ ದಾಳಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದು ಕೇವಲ ಖರ್ಗೆ ಅವರ ಮೇಲೆ ದಾಳಿಯ ಸಂಚು ಮಾತ್ರವಲ್ಲ, ಕನ್ನಡಿಗರ ಮೇಲೆ ದಾಳಿ ಮಾಡುವ ಸಂಚು ಇದಾಗಿದೆ. ಇಷ್ಟೆಲ್ಲಾ ಆದರೂ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪೊಲೀಸ್ ಇಲಾಖೆ ಹಾಗೂ ಚುನಾವಣಾ ಆಯೋಗ ಮೌನಕ್ಕೆ ಶರಣಾಗಿದೆ. ಆದರೆ ರಾಜ್ಯದ 6.50 ಕೋಟಿ ಕನ್ನಡಿಗರು ಈ ಚುನಾವಣೆಯಲ್ಲಿ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.

SCROLL FOR NEXT