ರಾಜ್ಯ

ಬಳ್ಳಾರಿಯಲ್ಲಿ ಬಿಜೆಪಿ-ಕಾಂಗ್ರೆಸ್‌ ಮಾರಾಮಾರಿ: ಕಾರ್ಯಕರ್ತನ ತಲೆಗೆ ಕಲ್ಲೇಟು

Shilpa D

ಬಳ್ಳಾರಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಮತದಾನ ನಡೆಯುತ್ತಿದ್ದು, ಇಂದು ಕೂಡ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವಿನ ಜಟಾಪಟಿ ಮುಂದುವರಿದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ರಾಜಕಿಯ ಕಣ ಕಾವೇರಿದೆ. ಅದಕೆ ಸಾಕ್ಷಿಯಾಗಿ ಮತದಾನದ ದಿನವಾದ ಬುಧವಾರದಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

ಸಂಜೀವರಾಯನಕೋಟೆ ಗ್ರಾಮದಲ್ಲಿ ಮತದಾನದ ವೇಳೆ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದೆ. ಕಾಂಗ್ರೆಸ್ ಸ್ಥಳೀಯ ಮುಖಂಡ ಉಮೇಶ್ ಗೌಡರಿಗೆ ಈ ಸಂದರ್ಭದಲ್ಲಿ ತಲೆಗೆ ಗಾಯವಾಗಿದೆ. ಉಮೇಶ್ ಗೌಡರು ಇತ್ತಿಚೆಗೆ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು.

ಉಮೇಶ್ ಗೌಡರು ಮತದಾನಕ್ಕೆ ತೆರಳುವ ವೇಳೆ ಕ್ಷುಲ್ಲಕ ಕಾರಣಕ್ಕೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಉಂಟಾಗಿದೆ. ಈ ಸಂದರ್ಭದಲ್ಲಿ ಉಮೇಶ್ ಗೌಡ ಅವರಿಗೆ ತಲೆಗೆ ಕಲ್ಲೇಟು ಬಿದ್ದು, ತಲೆಯಿಂದ ರಕ್ತ ಸುರಿದು ಗಾಯವುಂಟಾಗಿದೆ. 

ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಉಮೇಶ್ ಗೌಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೊಲೀಸರು ದೌಡಾಯಿಸಿದ್ದಾರೆ.

SCROLL FOR NEXT