ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷವು ಅತ್ಯಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆಯ ಸಮೀಪಕ್ಕೆ ಬರಲಿದೆ ಎಂದು ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳು ಹೇಳಿವೆ.
ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಪರವಾಗಿದ್ದರೂ ತಾವು ನಿಚ್ಚಳ ಬಹುಮತದದೊಂದಿಗೆ ಸರ್ಕಾರ ರಚನೆ ಮಾಡುಕ್ಕೇವೆ ಎಂದು ಆಡಳಿತಾರೂಢ ಬಿಜೆಪಿ ಕೂಡ ವಿಶ್ವಾಸದಲ್ಲಿದೆ. ಕೆಲ ಸಮೀಕ್ಷೆಗಳನ್ನು ಹೊರತು ಪಡಿಸಿದರೆ ನಿಚ್ಚಳ ಬಹುಮತದ ಸಾಧ್ಯತೆಯನ್ನು ಹೆಚ್ಚಿನ ಸಮೀಕ್ಷೆಗಳ ಫಲಿತಾಂಶಗಳು ಅಲ್ಲಗಳೆದಿವೆ. ಹೀಗಾಗಿ 2018ರ ಚುನಾವಣೆಯಂತೆ ಮತ್ತೆ ಅತಂತ್ರ ಸ್ಥಿತಿ ನಿರ್ಮಾಣವಾಗಬಹುದೇ ಎಂಬ ಚರ್ಚೆಯೂ ರಾಜ್ಯದಲ್ಲಿ ಬಿರುಸಾಗಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಜೆಡಿಎಸ್ ಕಿಂಗ್ ಮೇಕರ್ ಕನಸು ಕಾಣುತ್ತಿದ್ದು, ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ 2023: 36 ಕೇಂದ್ರಗಳಲ್ಲಿ ಮತ ಎಣಿಕೆ, 2,615 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಕಾಂಗ್ರೆಸ್ ನಾಯಕರು ಸ್ಪಷ್ಟ ಬಹುಮತದ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕೂಡ ಅಧಿಕಾರದಲ್ಲಿ ಮುಂದುವರಿಯುವುದಾಗಿ ಹೇಳುತ್ತಿದೆ. ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಎರಡೂ ಪಕ್ಷಗಳಿಗೆ ಮೈತ್ರಿಯ ಮುಕ್ತ ಆಹ್ವಾನ ನೀಡಿದ್ದಾರೆ. ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಅಧಿಕಾರದ ಹೆಬ್ಬಾಗಿಲು ಎಂದೇ ಪರಿಗಣಿತವಾಗಿರುವ ಕರ್ನಾಟಕ ವಿಧಾನಸಭೆಯ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬುದು ದೇಶದಾದ್ಯಂತ ಚರ್ಚೆಯ ಪ್ರಮುಖ ವಿಷಯವಾಗಿದೆ.
ಮತ ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆಯೇ ಪಕ್ಷದ ಶಾಸಕರನ್ನು ಕರೆದೊಯ್ದು ಸುರಕ್ಷಿತ ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳುವ ತಂತ್ರಗಾರಿಕೆಯನ್ನು ಆಯಾ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷ ತನ್ನ ಶಾಸಕರ ರಕ್ಷಣೆಯ ಹೊಣೆಯನ್ನು ಆಯಾ ಜಿಲ್ಲಾಧ್ಯಕ್ಷರಿಗೆ ನೀಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಶುಕ್ರವಾರವೇ ಸಭೆಗಳನ್ನೂ ನಡೆಸಿದ್ದಾರೆ. ಜೆಡಿಎಸ್ ವರಿಷ್ಠರು ದೂರವಾಣಿ ಮೂಲಕ ತಮ್ಮ ಅಭ್ಯರ್ಥಿಗಳಿಗೆ ಸಂದೇಶ ರವಾನಿಸಿದ್ದಾರೆ.
ಚುನಾವಣಾ ಕಣದಲ್ಲಿ ಪ್ರಬಲರಾಗಿರುವ ಪಕ್ಷೇತರರು ಮತ್ತು ಕಡಿಮೆ ಸಂಖ್ಯೆಯ ಸ್ಥಾನ ಗಳಿಸಬಹುದಾದ ಪಕ್ಷಗಳ ಮೇಲೆ ಪ್ರಮುಖ ರಾಜಕೀಯ ಪಕ್ಷಗಳು ಕಣ್ಣು ನೆಟ್ಟಿವೆ. ಅತಂತ್ರ ಸ್ಥಿತಿ ನಿರ್ಮಾಣವಾದರೆ ಅಂತಹ ಶಾಸಕರನ್ನು ಸೆಳೆದು ಸರ್ಕಾರ ರಚನೆಯ ಕಸರತ್ತಿಗೆ ಕೈಹಾಕುವುದಕ್ಕೆ ತಂತ್ರಗಾರಿಕೆ ನಡೆಸುತ್ತಿವೆ.
ಈ ಫಲಿತಾಂಶವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ಕೆಲವು ನಾಯಕರ ಭವಿಷ್ಯದ ದೃಷ್ಟಿಯಿಂದ ನಿರ್ಣಾಯಕವಾಗಿದೆ.