ರಾಜ್ಯ

ಕರ್ನಾಟಕ ಚುನಾವಣಾ ಫಲಿತಾಂಶ 2023: ಪಕ್ಷಾಂತರಿಗಳಿಗೆ ಶಾಕ್ ಕೊಟ್ಟ ಮತದಾರ: 30 ಮಂದಿಯ ಪೈಕಿ 8 ಮಂದಿಗೆ ಜಯ

Srinivasamurthy VN

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹಲವು ಅಚ್ಚರಿಗಳಿಗೆ ಕಾರಣವಾಗಿದ್ದು, ಪಕ್ಷಾಂತರಿ ಅಭ್ಯರ್ಥಿಗಳಿಗೆ ಶಾಕ್ ನೀಡಿದ್ದಾರೆ.

ರಾಜ್ಯದ 224 ಕ್ಷೇತ್ರಗಳ ಪೈಕಿ 30 ಕ್ಷೇತ್ರಗಳಲ್ಲಿ ಪಕ್ಷಾಂತರ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಆದರೆ ಈ ಬಾರಿ ಪಕ್ಷಾಂತರಿಗಳಿಗೆ ಮತದಾರ ಪ್ರಭು ಭರ್ಜರಿ ಶಾಕ್ ನೀಡಿದ್ದಾನೆ. 30 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಮಾತ್ರ ಪಕ್ಷಾಂತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಅಥಣಿಯಲ್ಲಿ ಲಕ್ಷ್ಮಣ ಸವದಿ (ಬಿಜೆಪಿಯಿಂದ ಕಾಂಗ್ರೆಸ್), ಅರಕಲಗೂಡಿನಲ್ಲಿ ಎ ಮಂಜು (ಬಿಜೆಪಿಯಿಂದ ಜೆಡಿಎಸ್), ಕಾಗವಾಡದಲ್ಲಿ ರಾಜೂಕಾಗೆ (ಬಿಜೆಪಿಯಿಂದ ಕಾಂಗ್ರೆಸ್), ಅರಸೀಕೆರೆಯಲ್ಲಿ ಶಿವಲಿಂಗೇಗೌಡ (ಜೆಡಿಎಸ್ ನಿಂದ ಕಾಂಗ್ರೆಸ್), ಗುಬ್ಬಿಯಲ್ಲಿ ಎಸ್ ಆರ್ ಶ್ರೀನಿವಾಸ್ (ಜೆಡಿಎಸ್ ನಿಂದ ಕಾಂಗ್ರೆಸ್), ಹಗರಿಬೊಮ್ಮನಹಳ್ಳಿಯಲ್ಲಿ ನೇಮಿರಾಜನಾಯ್ಕ್ (ಬಿಜೆಪಿಯಿಂದ ಜೆಡಿಎಸ್), ಮೊಳಕಾಲ್ಮೂರಿನಲ್ಲಿ ಎನ್ ವೈ ಗೋಪಾಲಕೃಷ್ಣ (ಬಿಜೆಪಿಯಿಂದ ಕಾಂಗ್ರೆಸ್) ಮತ್ತು ಚಿಕ್ಕಮಗಳೂರಿನಲ್ಲಿ ಸ್ಪರ್ಧಿಸಿದ್ದ ಎಚ್ ಡಿ ತಮ್ಮಣ್ಣ (ಬಿಜೆಪಿಯಿಂದ ಕಾಂಗ್ರೆಸ್)ಮಾತ್ರ ಗೆಲುವು ಸಾಧಿಸಿದ್ದಾರೆ.

ಉಳಿದ 22 ಮಂದಿ ಪಕ್ಷಾಂತರ ಅಭ್ಯರ್ಥಿಗಳು ಸೋತಿದ್ದು, ಬಿಜೆಪಿಯಿಂದ ಕಾಂಗ್ರೆಸ್ ಬಂದಿದ್ದ, ಜಗದೀಶ್ ಶೆಟ್ಟರ್ (ಹುಬ್ಬಳ್ಳಿ ಸೆಂಟ್ರಲ್), ಪುಟ್ಟಣ್ಣ (ರಾಜಾಜಿನಗರ), ಬಾಬುರಾವ್ ಚಿಂಚನಸೂರ್ (ಗುರುಮಿಟ್ಕಲ್) ಸೋತಿದ್ದು, ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರಿದ್ದ ರಘು ಆಚಾರ್ (ಚಿತ್ರದುರ್ಗ), ತೇಜಸ್ವಿ ಪಟೇಲ್ (ಚನ್ನಗಿರಿ), ಎಲ್ ಎಲ್ ಘೋಟ್ನೆಕರ್ (ಹಳಿಯಾಳ), ಮನೋಹರ್ ತಹಶೀಲ್ದಾರ್ (ಹಾನಗಲ್), ಮೊಯ್ದಿನ್ ಬಾವಾ (ಮಂಗಳೂರು ಉತ್ತರ), ಸೌರಭ್ ಚೋಪ್ರಾ (ಸವದತ್ತಿ ಯಲ್ಲಮ್ಮ) ಸೋಲುಕಂಡಿದ್ದಾರೆ.

ಅಂತೆಯೇ ಬಿಜೆಪಿಯಿಂದ ಜೆಡಿಎಸ್ ಸೇರ್ಪಡೆಯಾಗಿದ್ದ ಎಬಿ ಮಾಲಕರೆಡ್ಡಿ (ಯಾದಗಿರಿ), ಆಯನೂರು ಮಂಜುನಾಥ್ (ಶಿವಮೊಗ್ಗ), ಭಾರತಿ ಶಂಕರ್ (ವರುಣಾ) ಎನ್ ಆರ್ ಸಂತೋಷ್ (ಅರಸೀಕೆರೆ), ವೀರಭದ್ರಪ್ಪ ಹಾಲರವಿ (ಹುಬ್ಬಳ್ಳಿ-ಧಾರವಾಡ ಪೂರ್ವ), ದೊಡ್ಡಪ್ಪಗೌಡ ನರಿಬೋಳ (ಜೇವರ್ಗಿ) ಸೂರ್ಯಕಾಂತ್  (ಬೀದರ್) ಸೋಲು ಕಂಡಿದ್ದಾರೆ.
 

SCROLL FOR NEXT