ರಾಜ್ಯ

ಸಿಎಂ ಹುದ್ದೆ ತಿಕ್ಕಾಟ ನಡುವೆಯೇ ಸಚಿವ ಸ್ಥಾನಕ್ಕಾಗಿ ಕೈ ಪಾಳಯದಲ್ಲಿ ಭರ್ಜರಿ ಲಾಬಿ: ಶುರುವಾಗಲಿದೆ ಹೊಸ ತಲೆನೋವು!

Manjula VN

ಬೆಂಗಳೂರು: ಮುಖ್ಯಮಂತ್ರ ಆಯ್ಕೆ ಕಗ್ಗಂಟಿನ ನಡುವೆ 10ಕ್ಕೂ ಹೆಚ್ಚು ಸಚಿವ ಸ್ಥಾನದ ಆಕಾಂಕ್ಷಿಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಯ್ಯ ಅವರ ಮನೆಗಳಿಗೆ ಪರೇಡ್ ನಡೆಸಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ನಿನ್ನೆ ಡಿಕೆ.ಶಿವಕುಮಾರ್ ಅವರ ಜನ್ಮದಿನವನ್ನು ಆಚರಿಸಲಾಗಿತ್ತು. ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ನೆಪದಲ್ಲಿಯೇ ಹಲವು ಸಚಿವ ಸ್ಥಾನದ ಆಕಾಂಕ್ಷಿಗಳು ಡಿಕೆಶಿ ಅವರನ್ನು ಭೇಟಿ ಮಾಡಿದರು. ಈ ವೇಳೆ ತಮಗೆ ಸಚಿವ ಸ್ಥಾನ ನೀಡುವಂತೆಯೂ ಲಾಬಿ ನಡೆಸಿದರು ಎಂದು ಮೂಲಗಳಿಂದ ತಿಳಿದುಬಂದಿದೆ.

ಇನ್ನು ಮುಖ್ಯಮಂತ್ರಿ ಆಯ್ಕೆ ಸಂಬಂಧ  ಭಾನುವಾರ ರಾತ್ರಿ ಬೆಂಗಳೂರಿಗೆ ಬಂದಿದ್ದ ಎಐಸಿಸಿ ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ಸೋಮವಾರ ಬೆಳಗ್ಗೆ ತೆರಳಿದ್ದರು. ನಂತರ ಶಾಸಕರ ಅಭಿಪ್ರಾಯವನ್ನು ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಲುಪಿಸಿದ್ದರು.

ಬಳಿಕ ವರಿಷ್ಠರು ಸೋಮವಾರ ದೆಹಲಿಗೆ ಬರುವಂತೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಸೂಚಿಸಿದ್ದರು.

ಈ ಮಧ್ಯೆ, ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದು, ಸೋಮವಾರ ರಾತ್ರಿ ದೆಹಲಿಯಲ್ಲಿಯೇ ತಂಗಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಅವರು ಅನಾರೋಗ್ಯದ ಕಾರಣ ದೆಹಲಿಗೆ ತೆರಳಿಲ್ಲ. ಸೋಮವಾರ ರಾತ್ರಿ ಡಿಕೆ ಶಿವಕುಮಾರ್ ಅವರು ವೈದ್ಯಕೀಯ ತಪಾಸಣೆಗೂ ಒಳಗಾಗಿದ್ದಾರೆ. ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ರದ್ದು ಮಾಡಿದ ಬೆನ್ನಲ್ಲೇ ಅವರ ಸಹೋದರನೂ ಆಗಿರುವ ಸಂಸದ ಡಿಕೆ ಸುರೇಶ್ ಅವರು ದೆಹಲಿಗೆ ತೆರಳಿದ್ದಾರೆ. ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಸಂಜೆ 5.30ರ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. ಇವರ ದೆಹಲಿ ಪ್ರವಾಸ ಸದ್ಯ ಕುತೂಹಲ ಕೆರಳಿಸಿದೆ.

ಈ ಮಧ್ಯೆ, ವೈದ್ಯಕೀಯ ತಪಾಸಣೆಗೆ ಒಳಗಾದ ನಂತರ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ಅವರು, ಮಂಗಳವಾರ ದೆಹಲಿಗೆ ತೆರಳುತ್ತೇನೆ. ಸೋನಿಯಾಗಾಂಧಿ ಅವರನ್ನು ಭೇಟಿಯಾಗುವುದೇ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ.

SCROLL FOR NEXT