ರಾಜ್ಯ

ಆರ್‌ಎಸ್‌ಎಸ್ ಕಚೇರಿಗೆ ಬಸವರಾಜ ಬೊಮ್ಮಾಯಿ ಭೇಟಿ: ಪಕ್ಷ ಸಂಘಟನೆ ಕುರಿತು ಚರ್ಚೆ

Shilpa D

ಬೆಂಗಳೂರು: ಚುನಾವಣೆಯ ಫಲಿತಾಂಶದ ಬಳಿಕ ಮತ್ತಷ್ಟು ಕ್ರೀಯಾಶೀಲರಾಗಿರುವ ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ  ಕಚೇರಿಗೆ ಭೇಟಿ ನೀಡಿದರು. ಪಕ್ಷ ಸಂಘಟನೆ ಕುರಿತು ಸಂಘದ ನಾಯಕರೊಂದಿಗೆ ಚರ್ಚೆ ಮಾಡಿದರು.

ಸೋಮವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಶವಕೃಪಕ್ಕೆ ಭೇಟಿ ನೀಡಿ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂದು ಆರ್ ಎಸ್ ಎಸ್ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಬಗ್ಗೆ ಚರ್ಚೆ ಮಾಡಿದ್ದೇವೆ. ಬರುವಂತಹ ದಿನಗಳಲ್ಲಿ ಪಕ್ಷವನ್ನು ಮುಂದೆ ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಮಾತುಕತೆಯು ನಡೆದಿದೆ ಎಂದರು.

ಬಿಜೆಪಿ ರಾಜ್ಯಾಧಕ್ಷರು, ಕೇಂದ್ರದ ವರಿಷ್ಠರ ಜೊತೆಗೆ ಹಲವಾರು ಬಾರಿ ಚರ್ಚಿಸಲಿದ್ದಾರೆ. ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವನ್ನು ಮುಂದಿನ ದಿನಗಳಲ್ಲಿ ಹೇಗೆ ಸಂಘಟನೆ ಮಾಡಬೇಕು ಎನ್ನುವ ತೀರ್ಮಾನ ಮಾಡಲಿದ್ದೇವೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಸಭೆಯನ್ನು ಕರೆದಿಲ್ಲ. ಶಾಸಕರ ಸಭೆಯನ್ನು ರಾಜ್ಯಾಧಕ್ಷರು ಕರೆಯಲಿದ್ದಾರೆ ಎಂದು ಹೇಳಿದರು.

ಈ ವಾರ ಬಿಜೆಪಿಯಿಂದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟಿಲ್ ಅವರು ಸಭೆ ಕರೆದಿದ್ದಾರೆ. ಆದರೆ ಯಾವಾಗ ಸಭೆ ನಡೆಯಲಿದೆ ಎಂಬುದು ಇನ್ನು ನಿಗದಿಯಾಗಿಲ್ಲ. ಈ ಸಭೆಯಲ್ಲಿಯೇ ವಿರೋಧ ಪಕ್ಷದ ನಾಯಕರ ಆಯ್ಕೆ ಬಗ್ಗೆ ತಿಳಿದು ಬರಲಿದೆ.

SCROLL FOR NEXT