ರಾಜ್ಯ

ಗದಗ: ಜಿಲ್ಲೆಯಲ್ಲಿ ಚಿರತೆ ಪ್ರತ್ಯಕ್ಷ, ಆತಂಕದಲ್ಲಿ ಜನತೆ

Manjula VN

ಗದಗ: ಗದಗ ಜಿಲ್ಲೆಯ ಕಾಲಕಾಲೇಶ್ವರ ಗ್ರಾಮದಲ್ಲಿ ಚಿರತೆಯೊಂದು ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದು, ಈ ಬೆಳವಣಿಗೆಯು ಜನತೆ ಆತಂಕದಲ್ಲಿ ದಿನಕಳೆಯುವಂತೆ ಮಾಡಿದೆ.

ಶುಕ್ರವಾರ ಸಂಜೆ ಗ್ರಾಮದ ಹೊರವಲಯದ ಗುಡ್ಡದಲ್ಲಿ ಕರುವಿನ ಕಿರುಚಾಟ ಕೇಳಿದ ಕೆಲ ರೈತರು ದೊಣ್ಣೆಯೊಂದಿಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಚಿರತೆ ಇರುವುದನ್ನು ಕಂಡು ಭಯಭೀತರಾಗಿದ್ದಾರೆ.

ಬಳಿಕ ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಗಸ್ತು ತಿರುಗುತ್ತಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೇ ವೇಳೆ ಆತಂಕದಲ್ಲಿರುವ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡುತ್ತಿದ್ದಾರೆ.

ನಾಲ್ಕು ತಿಂಗಳ ಹಿಂದೆ ಸಮೀಪದ ಗ್ರಾಮಗಳಲ್ಲಿ ಕೆಲವು ಹಸುಗಳ ಮೇಲೆ ಚಿರತೆಯೊಂದು ದಾಳಿ ನಡೆಸಿತ್ತು. ಬಳಿಕ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಇದೀಗ ಮತ್ತೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ ಗ್ರಾಮದಲ್ಲಿ ಚಿರತೆ ಭೀತಿ ಆವರಿಸಿದೆ.

ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿಯಲಾಗುತ್ತದೆ. ಜನತೆ ವದಂತಿಗಳಿಗೆ ಕಿವಿಗೊಡಬಾರದು. ಆದರೆ, ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಬೇಕೆಂದು ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT