ರಾಜ್ಯ

ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ; ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ: ಸರ್ಕಾರ

Manjula VN

ಬೆಂಗಳೂರು: ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಕಾನೂನು ಅಂಶಗಳ ಅಧ್ಯಯನ ಮಾಡಲು ಸಮಿತಿ ರಚನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸೋಮವಾರ ಹೇಳಿದೆ.

ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಿಬಿಎಂಪಿ ಅಧಿಕಾರಿಗಳೊಂದಿಗೆ ಚೊಚ್ಚಲ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಬಿಬಿಎಂಪಿ ಚುನಾವಣೆ ನಡೆಸುವ ಕುರಿತು ಚುನಾವಣಾ ಪ್ರಣಾಳಿಕೆಯಲ್ಲೂ ಘೋಷಣೆ ಮಾಡಲಾಗಿತ್ತು. ಈ ನಿಟ್ಟಿನಲ್ಲಿ  ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಕಾನೂನು ಅಂಶಗಳನ್ನು ಪರಿಶೀಲಿಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಪರಿಷತ್ತಿನ ಅವಧಿಯು ಸೆಪ್ಟೆಂಬರ್ 2020 ರಂದು ಕೊನೆಗೊಂಡಿತು ಮತ್ತು ಅದರ ನಂತರ ಕಾರ್ಯವಿಧಾನದ ಪ್ರಕಾರ ಚುನಾವಣೆಗಳು ನಡೆಯಬೇಕಿತ್ತು. ಆದರೆ, ಚುನಾವಣೆ ಎರಡೂವರೆ ವರ್ಷ ವಿಳಂಬವಾಗಿದೆ. 2007-10ರ ಅವಧಿಯಲ್ಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ 2010ರಲ್ಲಿ ಚುನಾವಣೆ ನಡೆದಾಗಲೂ ಇದೇ ಪರಿಸ್ಥಿತಿ ಉಂಟಾಗಿತ್ತು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯೂ ಒಂದು ವರ್ಷ ವಿಳಂಬವಾಗಿದೆ.

ಇದೀಗ ಡಿಕೆ.ಶಿವಕುಮಾರ್ ಅವರ ಘೋಷಣೆಯಿಂದ ತಜ್ಞರು ಹಾಗೂ ಕಾರ್ಯಕರ್ತರು ನಿರಾಳಗೊಂಡಿದ್ದಾರೆ.

''ಬಿಬಿಎಂಪಿ ಚುನಾವಣೆ ನಡೆಸುವುದು ಮೊದಲ ಆದ್ಯತೆಯಾಗಬೇಕು. ಕೂಡಲೇ ನ್ಯಾಯಯುತ ಹಾಗೂ ಪಾರದರ್ಶಕವಾಗಿ ವಾರ್ಡ್ ಸಮಿತಿಗಳನ್ನು ರಚಿಸಬೇಕು. ಬಿಬಿಎಂಪಿ ಕಾಯಿದೆಗೆ ಶಾಸಕಾಂಗ ಬದಲಾವಣೆಗಳ ಕುರಿತು ತಮ್ಮ ಅಭಿಪ್ರಾಯವನ್ನು ತೆಗೆದುಕೊಳ್ಳಲು ಸಚಿವರು ಎಲ್ಲಾ 28 ನಗರ ಶಾಸಕರೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ನಗರದ ನಿವಾಸಿ ಶ್ರೀನಿವಾಸ ಅಲವಿಲ್ಲಿ ಹೇಳಿದ್ದಾರೆ.

ಕಾನೂನು ಅಂಶಗಳನ್ನು ವಿವರಿಸಿದ ಬಿಬಿಎಂಪಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಅಬ್ದುಲ್ ವಾಜಿದ್ ಅವರು, ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಂಡಿದೆ, ಆದರೆ, ಒಬಿಸಿ ಕೋಟಾದ ಮೀಸಲಾತಿ ವಿಚಾರ ಸುಪ್ರೀಂಕೋರ್ಟ್‌ ಅಂಗಳದಲ್ಲಿದೆ. ಮಾರ್ಚ್ 31 ರಂದು ರಾಜ್ಯ ಸರ್ಕಾರ ಮೀಸಲಾತಿ ಕುರಿತು ವರದಿ ಸಲ್ಲಿಸಬೇಕಾಗಿತ್ತು, ಆದರೆ ಅದನ್ನೂ ಇನ್ನೂ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಎಲ್ಲವನ್ನೂ ತೆರವುಗೊಳಿಸಿದ್ದೇ ಆದರೆ, ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಿದರೆ ಆರು ತಿಂಗಳೊಳಗೆ ಚುನಾವಣೆಗಳನ್ನು ನಡೆಸಬಹುದು. ಆದರೆ, ಇದು ಸರ್ಕಾರದ ಇಚ್ಛೆಯ ಮೇಲೆ ಅವಲಂಬಿತವಾಗಿದೆ. 243 ವಾರ್ಡ್‌ಗಳ ವಿಂಗಡಣೆ ಮತ್ತು ರಚನೆಯ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಸಮಾಧಾನವಿಲ್ಲ. ವಾರ್ಡ್‌ಗಳ ವಿಂಗಡಣೆ ಮತ್ತು ರಚನೆ ಮರಳಿ ಮಾಡಲು ನಿರ್ಧರಿಸಿದ್ದೇ ಆದರೆ, ಚುನಾವಣೆ ಮತ್ತಷ್ಟು ವಿಳಂಬವಾಗುತ್ತದೆ. ಸರ್ಕಾರ ಮನಸ್ಸು ಮಾಡಿದ್ದೇ ಆದರೆ, ಮೀಸಲಾತಿ ವಿಚಾರ ಇತ್ಯರ್ಥ ಮಾಡಿ ಚುನಾವಣೆ ಘೋಷಣೆಯಾಗಬಹುದು. ಇದಕ್ಕಾಗಿ ಬೆಂಗಳೂರಿನ 28 ಶಾಸಕರನ್ನು ಒಟ್ಟುಗೂಡಿಸುವುದು ಸವಾಲಿನ ಕೆಲಸವಾಗಿದೆ ಎಂದು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹೇಳಿದ್ದಾರೆ.

ಬಿಬಿಎಂಪಿ ಕಾಯ್ದೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಪರಿಷ್ಕರಿಸುವ ಚಿಂತನೆಯನ್ನು ಬದಿಗಿಟ್ಟು ಚುನಾವಣೆ ನಡೆಸಬೇಕು ಎಂದು ಮಾಜಿ ಕಾರ್ಪೊರೇಟರ್‌ಗಳು ಮತ್ತು ತಜ್ಞರು ಸಲಹೆ ನೀಡಿದ್ದಾರೆ.

SCROLL FOR NEXT