ರಾಜ್ಯ

Bengaluru Airport: ವಿಮಾನದಲ್ಲೇ ವಜ್ರಾಭರಣ ಮರೆತ ಮಹಿಳೆ: ಪೊಲೀಸರು-ಭದ್ರತಾ ಸಿಬ್ಬಂದಿ ಬೃಹತ್ ಶೋಧ ಕಾರ್ಯ!

Srinivasamurthy VN

ಬೆಂಗಳೂರು: ಮಹಿಳೆಯೊಬ್ಬರು ಸುಮಾರು 5 ಲಕ್ಷ ರೂ ಮೌಲ್ಯದ ವಜ್ರಾಭರಣಗಳನ್ನು ವಿಮಾನದಲ್ಲೇ ಮರೆತ ಪರಿಣಾಮ ಪೊಲೀಸರು-ಭದ್ರತಾ ಸಿಬ್ಬಂದಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 1 ರಲ್ಲಿ ಮಹಿಳೆಯೊಬ್ಬರು ವಿಮಾನದಲ್ಲಿ ಬ್ಯಾಗ್ ವೊಂದನ್ನು ಮರೆತಿದ್ದರು. ಈ ಬ್ಯಾಗ್ ನಲ್ಲಿ ಸುಮಾರು 5 ಲಕ್ಷ ರೂ ಮೌಲ್ಯದ ವಜ್ರಾಭರಣವಿತ್ತು ಎನ್ನಲಾಗಿದೆ. ಬ್ಯಾಗ್ ನಲ್ಲಿ 1 ಲಕ್ಷ ರೂ ನಗದು, ಒಂದು ಜೋಡಿ ಸಾಲಿಟೇರ್ ವಜ್ರದ ಕಿವಿಯೋಲೆಗಳು ಮತ್ತು ಸುಮಾರು 4 ಲಕ್ಷ ಮೌಲ್ಯದ ಉಂಗುರವಿತ್ತು ಎಂದು ಹೇಳಲಾಗಿದೆ.

ಅಕ್ಟೋಬರ್ 29 ರಂದು ಫ್ಲೈಯರ್ ಕೊಚ್ಚಿಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನದ (6E 702) ಮೂಲಕ ಬಂದು ನಂತರ ಟರ್ಮಿನಲ್ 1 ರಿಂದ ಅಹಮದಾಬಾದ್‌ಗೆ ಸಂಪರ್ಕಿಸುವ ಇಂಡಿಗೋ ವಿಮಾನವನ್ನು ತೆಗೆದುಕೊಂಡಾಗ ಸುಮಾರು 40 ವರ್ಷದ ಮಹಿಳೆ ಬ್ಯಾಗ್ ಮರೆತಿದ್ದರು. ಬಳಿಕ ಬ್ಯಾಗ್ ನೆನಪಾಗಿ ಆಕೆ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳನ್ನು ಶೋಧಕ್ಕೆ ಕಳುಹಿಸಿದ್ದಾರೆ. ಮಹಿಳೆ ಅಂತಿಮವಾಗಿ ವಿಮಾನದಲ್ಲಿ ತಮ್ಮ ಸೀಟ್ ನಲ್ಲಿ ಕುಳಿತಿದ್ದಾಗ ಬ್ಯಾಗ್ ಅನ್ನು ನೋಡಿದ್ದರಂತೆ. ಅಹಮದಾಬಾದ್ ತಲುಪಿದ ನಂತರ ಮಹಿಳೆಗೆ ತನ್ನ ಬ್ಯಾಗ್ ಕಾಣೆಯಾಗಿದೆ ಎಂದು ಅರಿವಾಯಿತು. 

ವಿಮಾನ ಹತ್ತುವ ಮುನ್ನ ಬೆಂಗಳೂರಿನಲ್ಲಿ ಕಳ್ಳತನವಾಗಿದೆ ಎಂದು ಭಾವಿಸಿ, ನಗರದಲ್ಲಿದ್ದ ತನ್ನ ಸ್ನೇಹಿತ ಪ್ರಣವ್ ಗಂಭೀರ್ ಅವರನ್ನು ಸಂಪರ್ಕಿಸಿ ಮಹಿಳೆ ಆತನ ಸಹಾಯ ಕೇಳಿದ್ದಾಳೆ. ಅದೇ ದಿನ ಗಂಭೀರ್ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದರು ಮತ್ತು ನಾಪತ್ತೆಯಾದ ವಜ್ರಗಳು ಮತ್ತು ನಗದಿನ ಬಗ್ಗೆ ಎಫ್‌ಐಆರ್ (ಐಪಿಸಿಯ ಸೆಕ್ಷನ್ 379) ದಾಖಲಿಸಿದ್ದರು. ಬಳಿಕ ವಿಮಾನ ನಿಲ್ದಾಣದ ಪೊಲೀಸರು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆಗಳಿಂದ ವಿಮಾನ ನಿಲ್ದಾಣದೊಳಗೆ ಬೃಹತ್ ಹುಡುಕಾಟವನ್ನು ಪ್ರಾರಂಭಿಸಲಾಯಿತು.

ಈ ವೇಳೆ ವಿಮಾನ ನಿಲ್ದಾಣದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಕ್ರಾಸ್‌ಚೆಕ್ ಮಾಡಲಾಗಿತ್ತು ಮತ್ತು ಮಹಿಳೆ ಬೋರ್ಡಿಂಗ್ ಗೇಟ್ ದಾಟಿ ವಿಮಾನಕ್ಕೆ ಹೋಗುವಾಗ ನಿರ್ದಿಷ್ಟ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದಿರುವುದು ಕಂಡುಬಂದಿದೆ. ಬಳಿಕ ಈ ವಿಚಾರವನ್ನು ಇಂಡಿಗೋ ವಿಮಾನಯಾನ ಸಂಸ್ಥೆಗೆ ಎಚ್ಚರಿಸಲಾಗಿದೆ.  ಮರುದಿನ, ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಸಿಬ್ಬಂದಿಯೊಬ್ಬರು ವಿಮಾನದ ಒಳಗೆ ಅವರ ಸೀಟ್ ಸಂಖ್ಯೆ 13 ಸಿ ಬಳಿ ಬ್ಯಾಗ್ ಅನ್ನು ನೋಡಿದ್ದಾರೆ ಅದರಲ್ಲಿ ವಜ್ರಗಳು ಹಾಗೂ ನಗದು ಹಾಗೇ ಇತ್ತು. ಅದನ್ನು ಲಾಸ್ಟ್ ಅಂಡ್ ಫೌಂಡ್ ವಿಭಾಗಕ್ಕೆ ಹಸ್ತಾಂತರಿಸಿದ್ದಾರೆ. ಬಳಿಕ ಅದನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಈ ವಿಚಾರವನ್ನು ಮಹಿಳೆಗೆ ತಿಳಿಸಿ ವಿಮಾನನಿಲ್ದಾಣಕ್ಕೆ ಬಂದು ಅದನ್ನು ಸಂಗ್ರಹಿಸಲು ಆಕೆಗೆ ತಿಳಿಸಿದ್ದಾರೆ. 

ಬ್ಯಾಗ್ ಸಿಕ್ಕ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಆಕೆಯ ಸ್ನೇಹಿತೆ ಎಫ್‌ಐಆರ್ ಹಿಂಪಡೆದಿದ್ದಾರೆ ಎಂದು ತಿಳಿದುಬಂದಿದೆ.
 

SCROLL FOR NEXT