ರಾಜ್ಯ

ಪ್ರತಿಮಾ ಕೊಲೆ ಪ್ರಕರಣದಲ್ಲಿ ಟಾರ್ಗೆಟ್; ಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಲು ಪಿತೂರಿ: ಮುನಿರತ್ನ

Shilpa D

ಬೆಂಗಳೂರು: ಗಣಿ-ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಆರ್‌ಆರ್‌ ನಗರ ಶಾಸಕ ಮುನಿರತ್ನ ಅವರ ಹೆಸರು ತಳುಕು ಹಾಕಿಕೊಂಡಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮುನಿರತ್ನ ಆರೋಪಿಸಿದ್ದಾರೆ.

ಕೊಲೆ ಪ್ರಕರಣ ಬೆಳಕಿಗೆ ಬಂದ ನಂತರ, ಕೇಸ್ ನಲ್ಲಿ ಮುನಿರತ್ನ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಮುನಿರತ್ನ ಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಲು ವ್ಯವಸ್ಥಿತ ಪಿತೂರಿ ನಡೆಯುತ್ತಿದೆ  ಎಂದು ದೂರಿದ್ದಾರೆ.

ನನ್ನ ನಿವಾಸದ ಮುಂದೆ ಸಂಭವಿಸುವ ಅಪಘಾತಗಳಿಗೆ ನಾನೇ ಹೊಣೆಯಾಗಿದ್ದೇನೆಯೇ ಎಂದು ಪ್ರಶ್ನಿಸಿದ ಅವರು, ಪ್ರತಿಮಾ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ, ಅದರ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ತನಿಖೆ ಮುಗಿದ ನಂತರ, ರಾಜಕೀಯವಾಗಿ ನನ್ನನ್ನು ಮುಗಿಸಲು ಬಯಸುವವರಿಗೆ ಉತ್ತರ ಕೊಡುತ್ತೇನೆ ಎಂದು ಮುನಿರತ್ನ ತಿಳಿಸಿದ್ದಾರೆ.

ಪ್ರತಿಮಾ ಕೊಲೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ವಕ್ತಾರ ಮತ್ತು ಕಾನೂನು ವಿಭಾಗದ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ.

ಬೆಂಗಳೂರಿನ ಹುಣಸಮಾರನಹಳ್ಳಿ ಹಾಗೂ ಸೊಣ್ಣಪ್ಪನಹಳ್ಳಿ ಗ್ರಾಮಗಳ 4 ಎಕರೆ 5 ಗುಂಟೆ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಗಣಿಕಾರಿಗೆ ನಡೆದ ಬಗ್ಗೆ ವರದಿ ಸಿದ್ಧಪಡಿಸಿದ್ದ ಕೊಲೆಯಾದ ಅಧಿಕಾರಿ ಪ್ರತಿಮಾ, ಜಿಲ್ಲಾಧಿಕಾರಿಗೆ ನೀಡಿದ್ದರು. ಅಕ್ರಮ ಕಲ್ಲು ಗಣಿಗಾರಿಕೆಯಿಂದ ಸರ್ಕಾರಕ್ಕೆ 25.35 ಲಕ್ಷ ರು. ರಾಜಸ್ವಧನ ನಷ್ಟ ಆಗಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದ್ದರು.

ಪರವಾನಗಿ ಪಡೆಯದೇ ಹುಣಸಮಾರನಹಳ್ಳಿಯಲ್ಲಿ ಬಂಡೆಗಳನ್ನು ಸಿಡಿಸಿದ್ದಾರೆ.ಮೃತ ಅಧಿಕಾರಿ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ಬೆಂಗಳೂರಿನ ಚಿಕ್ಕಜಾಲ ಠಾಣೆಗೂ ದೂರು ನೀಡಲಾಗಿದ್ದು, ಪ್ರಕರಣದಲ್ಲಿ ಶಾಸಕ ಮುನಿರತ್ನ ಎರಡನೇ ಆರೋಪಿಯಾಗಿದ್ದಾರೆ.ಸೂರ್ಯಮುಕುಂದರಾಜ್ ಕೊಲೆಯನ್ನು ಎಲ್ಲಾ ಕೋನಗಳಿಂದಲೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು ಮತ್ತು ಮುನಿರತ್ನ ಅವರು ನೋಟಿಸ್ ಜಾರಿಗೊಳಿಸಿ ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಶಾಸಕ ಮುನಿರತ್ನ 4ನೇ ಆರೋಪಿಯಾಗಿದ್ದಾರೆ. ಇದೀಗ ಅಧಿಕಾರಿ ಪ್ರತಿಮಾ ನಿಗೂಢವಾಗಿ ಕೊಲೆಯಾದ ಬೆನ್ನಲ್ಲೇ ಅಕ್ರಮ ಗಣಿಕಾರಿಕೆ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಪ್ರತಿಮಾ ಪ್ರಕರಣದಲ್ಲಿ ಮುನಿರತ್ನ ಏನಾದರೂ ಹಸ್ತಕ್ಷೇಪ ಮಾಡಿರಬಹುದು. ಪೊಲೀಸರು ತನಿಖೆ ನಡೆಸಬಹುದು ಎಂದು ಭಾವಿಸುತ್ತೇನೆ ಎಂದು ಸೂರ್ಯ ಮುಕುಂದರಾಜ್ ಹೇಳಿದ್ದಾರೆ.

ಶನಿವಾರ (ನವೆಂಬರ್ 4) ರಾತ್ರಿ ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ಮರಳಿದ್ದ ಅಧಿಕಾರಿ ಪ್ರತಿಮಾ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಮೊದಲು ಉಸಿರುಗಟ್ಟಿಸಿ ಬಳಿಕ ಚಾಕುವಿನಿಂದ ಪ್ರತಿಮಾ ಅವರ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಪ್ರತಿಮಾ ಅವರ ಮಾಜಿ ಕಾರು ಚಾಲಕನನ್ನು ಬಂಧಿಸಲಾಗಿದೆ.

SCROLL FOR NEXT