ರಾಜ್ಯ

ಸ್ಥೂಲಕಾಯದ ಎಫೆಕ್ಟ್: ರಾಜ್ಯದ ಮಹಿಳೆಯರಲ್ಲಿ ಹೆಚ್ಚುತ್ತಿದೆ ಗರ್ಭಾಶಯದ ಕ್ಯಾನ್ಸರ್!

Manjula VN

ಬೆಂಗಳೂರು: ಮಹಿಳೆಯರಲ್ಲಿ ಕೆಲವು ರೀತಿಯ ಕ್ಯಾನ್ಸರ್ ಗಳು ಪ್ರಾಣಕ್ಕೆ ಹಾನಿ ಉಂಟು ಮಾಡುತ್ತದೆ. ಮಹಿಳೆಯರನ್ನು ಬಾಧಿಸುವ ಪ್ರಮುಖ ಐದು ಕ್ಯಾನ್ಸರ್‌ಗಳಲ್ಲಿ ಗರ್ಭಕೋಶದ ಕ್ಯಾನ್ಸರ್ ಕೂಡ ಒಂದಾಗಿದೆ. ಈ ಕ್ಯಾನ್ಸರ್ ಸ್ಥೂಲಕಾಯವುಳ್ಳ ಹಾಗೂ ಮುಟ್ಟುನಿಂತ ಮಹಿಳೆಯರಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಈ ಬೆಳವಣಿಗೆ ಆತಂಕವನ್ನು ಹೆಚ್ಚಿಸುತ್ತಿದೆ.

ನಾರಾಯಣ ಹೆಲ್ತ್ ಸಿಟಿಯ ಕನ್ಸಲ್ಟೆಂಟ್ ಗೈನೆಕಾಲಜಿಸ್ಟ್ ಮತ್ತು ರೊಬೊಟಿಕ್ ಸರ್ಜನ್ ಡಾ ರೋಹಿತ್ ಆರ್ ರಾನಡೆ ಮಾತನಾಡಿ, ಗರ್ಭಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ಶೇ.70 ರಷ್ಟು ಮಹಿಳೆಯರು, ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ. ಇಂತಹ ಪ್ರಕರಣಗಳು ನಮ್ಮ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ 25-30 ಪ್ರತಿಶತದಷ್ಟು ಏರಿಕೆಯಾಗಿರುವುದು ಕಂಡುಬಂದಿದೆ. 2016-17 ರಲ್ಲಿ, ಒಂದು ತಿಂಗಳಲ್ಲಿ ಒಂದು ಪ್ರಕರಣವನ್ನು ನೋಡುತ್ತಿದ್ದೆವು. ಆದರೀಗ 3-4 ಪ್ರಕರಣಗಳನ್ನು ನೋಡುತ್ತಿದ್ದೇವೆಂದು ಹೇಳಿದ್ದಾರೆ.

ಮಹಿಳೆಯೊಬ್ಬರು ಆಸ್ಪತ್ರೆಗೆ ಬಂದಾಗ 136 ಕೆಜಿ ತೂಕವಿದ್ದು. ಬೊಜ್ಜು ಮುಂತಾದ ಜೀವನಶೈಲಿ ಸಮಸ್ಯೆಗಳಿಂದ ಉಂಟಾಗುವ ಹೃದಯ ಸಂಬಂಧಿ ಸಮಸ್ಯೆಗಳಂತಹ ಇತರ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು ಎಂದು ತಿಳಿಸಿದ್ದಾರೆ.

ಗರ್ಭಾಶಯದ ಕ್ಯಾನ್ಸರ್ ಆರು ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ಆಗಿದೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರಾಜ್ಯದ ಮಹಿಳೆಯರಲ್ಲಿ ಶೇ.4.2ರಷ್ಟು ಮಂದಿಯಲ್ಲಿ ಗರ್ಭಾಶಯದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕ್ಯಾನ್ಸರ್ ರೋಗ ಹೆಚ್ಚಗುತ್ತಿದ್ದು, ಇದಕ್ಕೆ ಜೀವನಶೈಲಿ ಬದಲಾವಣೆಗಳೇ ಕಾರಣವಾಗಿವೆ ಎಂದು ವೈದ್ಯರು ಹೇಳಿದ್ದಾರೆ.

ಬಹುತೇಕ ಕ್ಯಾನ್ಸರ್ ರೋಗಿಗಳು ಸ್ಥೂಲಕಾಯದಿಂದ ಬಳಲುತ್ತಿದ್ದಾರೆ. ಈ ಸ್ಥೂಲಕಾಯದಿಂದಲೇ ಕ್ಯಾನ್ಸರ್ ರೋಗದಿಂದ ಮರಣವಪ್ಪುವ ಸಂಖ್ಯೆ ಕೂಡ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ ಎಂದು ತಿಳಿಸಿದ್ದಾರೆ.

ಸಾಮಾನ್ಯ ಜನಸಂಖ್ಯೆಗೆ ಹೋಲಿಸಿದರೆ ವಯಸ್ಕ ಕ್ಯಾನ್ಸರ್ ರೋಗಿಗಳಲ್ಲಿ ಸ್ಥೂಲಕಾಯತೆ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿಯ (ಕೆಎಂಐಒ) ಮೆಡಿಕಲ್ ಆಂಕೊಲಾಜಿಸ್ಟ್ ಡಾ ಸುರೇಶ್ ಬಾಬು ಅವರು ಮಾತನಾಡಿ, ಬೊಜ್ಜು ಸಮಸ್ಯೆ ಮತ್ತು ಬಂಜೆತನದಿಂದಾಗಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸಣ್ಣ ವಯಸ್ಸಿನ ಮಹಿಳೆಯರಲ್ಲಿಯೂ ಗರ್ಭಾಶಯ ಕ್ಯಾನ್ಸರ್ ಗಳು ಪತ್ತೆಯಾಗುತ್ತಿದೆ. ಅಸಹಜ ರಕ್ತಸ್ರಾವದಂತಹ ರೋಗಲಕ್ಷಣಗಳ ಬಗ್ಗೆ ಮಹಿಳೆಯರು ಹೆಚ್ಚು ಜಾಗರೂಕರಾಗಿರಬೇಕು. ಸಮಸ್ಯೆ ಕಂಡುಬಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕೆಂದು ಹೇಳಿದ್ದಾರೆ.

ಗರ್ಭಕೋಶದ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವಂತಹ ಯಾವುದೇ ಪರೀಕ್ಷೆಗಳು ಇಲ್ಲ. ಆದರೆ, ದೇಹದಲ್ಲಿ ಕಂಡು ಬರುವ ಕೆಲ ಲಕ್ಷಣಗಳಿಂದ ಪತ್ತೆ ಮಾಡಬಹುದಾಗಿದೆ. ಋತುಚಕ್ರದ ವೇಳೆ ಮಹಿಳೆಯರಲ್ಲಿ ಸಾಮಾನ್ಯವಾಗಿ ಹೊಟ್ಟೆಯ ಸೆಳೆತ, ಋತುಚಕ್ರದ ಅಸಾಮಾನ್ಯತೆ, ಅತಿಯಾದ ರಕ್ತಸ್ರಾವದಿಂದ ನೋವು, ಹೊಟ್ಟೆಯ ಕಳೆಭಾಗದಲ್ಲಿ ಭಾರವಾಗುವುದು, ನಿಶ್ಯಕ್ತಿ ಮತ್ತು ದೇಹವು ಪೇಲವವಾಗುವುದು, ಸೊಂಟದ ಸುತ್ತಲು ಹೆಚ್ಚುವರಿ ಕೊಬ್ಬು, ಕಾಲುಗಳಲ್ಲಿ ನೋವು, ಸೆಳೆತ, ಊತ ಮತ್ತು ಲೈಂಗಿಕ ಕ್ರಿಯೆ ವೇಳೆ ತೀವ್ರ ರೀತಿಯ ನೋವು ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಬೇಕು.

SCROLL FOR NEXT