ರಾಜ್ಯ

ನಾಯಿ ಕಚ್ಚಿದ ಪ್ರಕರಣ: ನಟ ದರ್ಶನ್ ಇಂದು ವಿಚಾರಣೆಗೆ ಹಾಜರು ಸಾಧ್ಯತೆ

Manjula VN

ಬೆಂಗಳೂರು: ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರು ಬುಧವಾರ ಆರ್.ಆರ್.ನಗರ ಪೊಲೀಸ್‍ ಠಾಣೆಗೆ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.

ಇಂದು ಬೆಳಗ್ಗೆ 11.30 ಕ್ಕೆ ದರ್ಶನ್ ಅವರು ಠಾಣೆಗೆ ಆಗಮಿಸಲಿದ್ದು, ಈ ವೇಳೆ ಹೇಳಿಕೆ ದಾಖಲಿಸಲಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ದರ್ಶನ್ ಅವರಿಗೆ ನೋಟಿಸ್ ಜಾರಿ ಮಾಡಿದ್ದ ಪೊಲೀಸರು, ಮೂರು ದಿನದ ಒಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಸಿಸಿಟಿವಿ ದೃಶ್ಯಾವಳಿ ಜೊತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸೂಚಿಸಲಾಗಿತ್ತು.

ಈ ಹಿಂದೆ ದರ್ಶನ್ ವಿರುದ್ಧ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿತ್ತು.

ಈ ಬಗ್ಗೆ ಸ್ವತಃ ದೂರುದಾರರಾದ ಅಮಿತಾ ಜಿಂದಾಲ್ ಪ್ರತಿಕ್ರಿಯೆ ನೀಡಿದ್ದರು. ಆರ್‌ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದೆ. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್‌ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಕೇಳಿದೆ, ಆಗ ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದರು ಎಂದು ಮಾತನಾಡಿದ್ದರು.

ಮಾತಿನ ಚಕಮಕಿಯ ಬಳಿಕ ನಾಯಿಗಳು ತನ್ನ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ. ಅವರ ಸಿಬ್ಬಂದಿ ನಾಯಿಗೆ ಇಂಜೆಕ್ಷನ್ ಆಗಿದೆ ಹೋಗಿ ಎಂದು ಕಳುಹಿಸಿದ್ದರು. ಸ್ನೇಹಿತರ ಮಗನ ಸಹಾಯದಿಂದ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದಿದ್ದೆ. ಬಳಿಕ ಆರ್‌ಆರ್ ನಗರ ಪೊಲೀಸ್ ಠಾಣೆಗೆ ಹೋಗಿ ಘಟನೆ ಸಂಬಂಧ ದೂರು ನೀಡಿದ್ದೇನೆ ಎಂದು ವಿವರಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಸಿಬ್ಬಂದಿಯನ್ನ ಮೊದಲ ಆರೋಪಿ, ದರ್ಶನ್‌ರನ್ನು ಎರಡನೇ ಆರೋಪಿಯನ್ನಾಗಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.

SCROLL FOR NEXT