ರಾಜ್ಯ

ಕೆಇಎ ಪರೀಕ್ಷೆ ಅಕ್ರಮ ಪ್ರಕರಣ: ಆರ್ ಡಿ ಪಾಟೀಲ್ 9 ದಿನ ಸಿಐಡಿ ವಶಕ್ಕೆ

Manjula VN

ಕಲಬುರಗಿ: ಬ್ಲೂಟೂತ್ ಸಾಧನ ಬಳಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆ ಬರೆದ ಅಕ್ರಮ ಪ್ರಕರಣದ ಬಂಧಿತ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ್'ನನ್ನು ಸಿಐಡಿ ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ನ್ಯಾಯಾಂಗ ಬಂಧನದಲ್ಲಿ ಇದ್ದ ಆರೋಪಿಯನ್ನು ಪೊಲೀಸ್ ಬಿಗಿಭದ್ರತೆಯೊಂದಿಗೆ ಬುಧವಾರ ಮಧ್ಯಾಹ್ನ ಕಲಬುರಗಿಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ವೇಳೆ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಮಟ್ಟಿಗೆ ತಮ್ಮ ವಶಕ್ಕೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದರು. ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ. ಆರೋಪಿಯನ್ನು 9 ದಿನಗಳ ಮಟ್ಟಿಗೆ ಸಿಐಡಿ ವಶಕ್ಕೆ ನೀಡಿತು.

ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಸಿಐಡಿ ಪೊಲೀಸರು, ಕಲಬುರಗಿಯ ಐವಾನ್-ಇ ಶಾಹಿ ಪ್ರದೇಶದ ಗೆಸ್ಟ್ ಹೌಸಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ಪಿಎಸ್ಐ ಅಕ್ರಮ ಸಂಬಂಧ ಇದೇ ಗೆಸ್ಟ್‌ ಹೌಸ್‌ನಲ್ಲಿ ಆತನ ವಿಚಾರಣೆ ನಡೆಸಿದ್ದರು.

ಪ್ರಕರಣ ಸಂಬಂಧ ದಾಖಲಾದ ದೂರುಗಳನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ನ ಕಲಬುರಗಿ ಪೀಠಕ್ಕೆ ಪಾಟೀಲ್ ಅರ್ಜಿ ಸಲ್ಲಿಸಿದ್ದ.

ಈ ಅರ್ಜಿಯನ್ನೂ ವಿಚಾರಣೆ ನಡೆಸಿದ ನ್ಯಾಯಾಲಯ, ದೂರುಗಳ ರದ್ದತಿಗೆ ಅಷ್ಟೊಂದು ಆತುರ ಏನಿದೆ’ ಎಂದು ಪ್ರಶ್ನಿಸಿ, ಅರ್ಜಿಯ ವಿಚಾರಣೆಯನ್ನು ನ.17ಕ್ಕೆ ಮುಂದೂಡಿತು.

SCROLL FOR NEXT