ರಾಜ್ಯ

ಬೆಸ್ಕಾಂ ನಿರ್ಲಕ್ಷಕ್ಕೆ ತಾಯಿ-9 ತಿಂಗಳ ಮಗು ಬಲಿ; ವಿದ್ಯುತ್ ತಂತಿ ತುಳಿದು ದಾರುಣ ಸಾವು

Manjula VN

ಬೆಂಗಳೂರು: ರಸ್ತೆ ಮೇಲೆ ಹೋಗುತ್ತಿದ್ದಾಗ ವಿದ್ಯುತ್ ತಂತಿ ತುಳಿದು ತಾಯಿ ಹಾಗೂ 9 ತಿಂಗಳ ಮಗು ಸ್ಥಳದಲ್ಲೇ ದುರ್ಮರಣ ಸಾವನ್ನಪ್ಪಿರುವ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೋಪ್ ಫಾರ್ಮ್ ಜಂಕ್ಷನ್ ಬಳಿ ಭಾನುವಾರ ನಡೆದಿದೆ.

ಮೃತರನ್ನು ಎಕೆಜಿ ಕಾಲೋನಿ ನಿವಾಸಿಗಳಾದ ಸೌಂದರ್ಯ ಮತ್ತು ಸುವೀಕ್ಷಾ ಎಂದು ಗುರುತಿಸಲಾಗಿದೆ, ಇಂದು ಮುಂಜಾನೆ 6 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ತಾಯಿ ಹಾಗೂ ಮಗಳು, ವೈಟ್ ಫೀಲ್ಡ್ ನ ಕಾಡುಗೋಡಿಯಲ್ಲಿ ಬಸ್ ಇಳಿದು ನಡೆದುಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ರಸ್ತೆ ಮೇಲೆ ತುಂಡಾಗಿ ಬಿದ್ದಿದ್ದ ಕರೆಂಟ್ ವೈರ್ ಕಾಣದೇ ತುಳಿದಿದ್ದಾರೆ. ಕ್ಷಣಾರ್ಧದಲ್ಲಿ ವಿದ್ಯುತ್ ಪ್ರವಹಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸೌಂದರ್ಯ ಅವರ ಪತಿ ವಿದ್ಯುತ್ ಸ್ಪರ್ಶದಿಂದ ಪಾರಾಗಿದ್ದಾರೆ.

ಘಟನೆ ಬಳಿಕ ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈಟ್‌ಫೀಲ್ಡ್‌ನಲ್ಲಿರುವ ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಸದ ಪಿಸಿ ಮೋಹನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ವಿದ್ಯುತ್ ಸ್ಪರ್ಶಿಸಿ ಹೋಪ್‌ಫಾರ್ಮ್ ಜಂಕ್ಷನ್‌ನಲ್ಲಿ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ಹೃದಯ ವಿದ್ರಾವಕವಾಗಿದೆ. ಘಟನೆ ಬೆಸ್ಕಾಂ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತಿದೆ. ಇಂತಹ ಘಟನೆಗಳನ್ನು ತಪ್ಪಿಸಲು ಮತ್ತು ಸುರಕ್ಷಿತ ವಾತಾವರಣವನ್ನು ಖಾತ್ರಿಪಡಿಸುವಲ್ಲಿ ಬೆಸ್ಕಾಂ ಜವಾಬ್ದಾರಿ ಪ್ರಮುಖವಾದದ್ದು ಎಂದು ಹೇಳಿದ್ದಾರೆ.

ವೈಟ್‌ಫೀಲ್ಡ್ ರೈಸಿಂಗ್ ಸಂಘಟನೆ ಟ್ವೀಟ್ ಮಾಡಿ, ಕಾಲು ದಾರಿಯಲ್ಲಿ ಲೈವ್ ವೈರ್ ಬಂದಿದ್ದಾರದೂ ಹೇಗೆ? ಬಸ್ ನಿಲ್ದಾಣದ ಪಕ್ಕದಲ್ಲಿರುವ ಈ ಪಾದಚಾರಿ ಮಾರ್ಗದಲ್ಲಿ ಸಾವಿರಾರು ಜನ ಸಂಚರಿಸುತ್ತಾರೆ. ಮೆಟ್ರೋ ನಿಲ್ದಾಣ ಸ್ವಲ್ಪ ದೂರದಲ್ಲಿಯೇ ಇದೆ. ಈ ನಿರ್ಲಕ್ಷ್ಯವು ಕ್ರಿಮಿನಲ್ ಪ್ರಕರಣಕ್ಕೆ ಸಮಾನವಾದದ್ದು ಎಂದು ಹೇಳಿದೆ.

SCROLL FOR NEXT