ರಾಜ್ಯ

'ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ' ಯೋಜನೆಗೆ ಸರ್ಕಾರ ಚಾಲನೆ

Manjula VN

ಬೆಂಗಳೂರು: ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ‘ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ’ (ಎಎಂಪಿಕೆ) ಯೋಜನೆಗೆ ರಾಜ್ಯ ಸರ್ಕಾರ ಬುಧವಾರ ಚಾಲನೆ ನೀಡಿದೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಅನಿಮೀಯ ಮುಕ್ತ ಪೌಷ್ಠಿಕ ಕರ್ನಾಟಕ' ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅನೀಮಿಯಾ ವಿದ್ಯಾರ್ಥಿಗಳಿಗೆ ಸಾಂಕೇತಿಕಾಗಿ ಮಾತ್ರೆಗಳನ್ನು ವಿತರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಕಾರ್ಯಕ್ರಮಕ್ಕೆ 185.74 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು.

ಮಕ್ಕಳು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕ ಪುರುಷರು-ಮಹಿಳೆಯರು ಹಾಗೂ ಹಿರಿಯರು ಸಮಾಜದಲ್ಲಿ ಆರೋಗ್ಯವಂತರಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ನುರಿತ ತಂಡದ ವೈದ್ಯರಿಂದ ರಕ್ತ ಪರೀಕ್ಷೆ ಮಾಡಿ, ಅನೀಮಿಯಾದಿಂದ ಬಳಲುವವರಿಗೆ ಸೂಕ್ತ ಚಿಕಿತ್ಸೆ ಮತ್ತು ಔಷಧಿಗಳನ್ನು ನೀಡಲಾಗುವುದು. ನಾವು ಅನೇಕ ಕಾರಣಗಳಿಂದ ಆರೋಗ್ಯ ಹದಗೆಟ್ಟು ಕೆಲವು ರೋಗಗಳಿಗೆ ತುತ್ತಾಗುತ್ತೇವೆ. ಕೆಲವು ರೋಗಳನ್ನು ಪ್ರಯತ್ನದಿಂದ ತಡೆಗಟ್ಟಲು ಸಾಧ್ಯವಿರುವುದರಿಂದ ಪ್ರತಿಯೊಬ್ಬರೂ ಪೌಷ್ಠಿಕ ಆಹಾರ ಸೇವಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಅನಕ್ಷರತೆ ಮತ್ತು ಬಡತನವಿದ್ದು, ಬಡತನ ಇರುವವರಿಗೆ ಪೌಷ್ಠಿಕ ಆಹಾರ ಸಿಗುವುದು ಕಷ್ಟ. ಆರ್ಥಿಕವಾಗಿ ಸಬಲರಾದರೆ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡಲು ಸಾಧ್ಯವಾಗುತ್ತದೆ. ಇದನ್ನು ಅರಿತ ಸರ್ಕಾರ ಮಕ್ಕಳಲ್ಲಿನ ಪೌಷ್ಠಿಕಾಂಶದ ಕೊರತೆ ನೀಗಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣು ಮತ್ತು ಚುಕ್ಕಿ ನೀಡಲಾಗುವುದು ಎಂದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಅನೀಮಿಯದಿಂದ ಗ್ರಹಿಕಾ ಶಕ್ತಿ ಕಡಿಮೆಯಾಗಿ ಮಕ್ಕಳ‌ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಿದೆ. ಐದು ವರ್ಷದೊಳಗಿನ 65% ಮಕ್ಕಳು ಅನೀಮಿಯಾಗೆ ಒಳಗಾಗಿದ್ದಾರೆ. 15-49 ವಯಸ್ಸಿನ ಮಹಿಳೆಯರಲ್ಲಿ ಶೇ.47.8ರಷ್ಟು ಅನೀಮಿಯ ಇದೆ. ಹಿಮೋಗ್ಲೋಬಿನ್ ಕಡಿಮೆಯಾದಾಗ ಅನೀಮಿಯ ಶುರುವಾಗುತ್ತೆ. ಇದಕ್ಕೆ ಪೌಷ್ಟಿಕಾಂಶದ ಕೊರತೆಯೇ ಮುಖ್ಯ ಕಾರಣ. ಕಬ್ಬಿಣಾಂಶ ಕೊರತೆಯಿಂದ ಹಿಮೋಗ್ಲೋಬಿನ್ ಕಡಿಮೆಯಾಗುತ್ತೆ. ಈ ಬಗ್ಗೆ ನಮ್ಮ ಜನರು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಇದರಿಂದ ನಮ್ಮ‌ ದೈಹಿಕ, ಮಾನಸಿಕ‌ ಬೆಳವಣಿಗೆ ಕಡಿಮೆಯಾಗುತ್ತೆ. ಸುಸ್ತು ಆಯಾಸದಿಂದ ಮಾನವನ ಶಕ್ತಿಯೇ ಕುಗ್ಗುತ್ತದೆ. ಹೀಗಾಗಿ ಅನೀಮಿಯ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದರು.‌

ಅನೀಮಿಯಾಗೆ ಒಳಗಾದವರಿಗೆ ಆರೋಗ್ಯ ಇಲಾಖೆಯಿಂದ ಅಗತ್ಯ ಚಿಕಿತ್ಸಾ ಔಷಧಿ ಪೂರೈಕೆ ಮಾಡುವುದರ ಜೊತೆಗೆ, ತಪಾಸಣೆಗೆ ಹೆಚ್ಚು ಒತ್ತು ನೀಡಲಾಗುವುದು. ಡಿಸೆಂಬರ್ ತಿಂಗಳಲ್ಲಿ ಶಾಲಾ ಮಕ್ಕಳಿಗೆ ಉಚಿತ ಅನೀಮಿಯ ಆರಂಭಿಸಲಿದ್ದೇವೆ.‌ ಏಪ್ರಿಲ್‌ ಒಳಗೆ ಐದು ವರ್ಷದೊಳಗಿನ ಮಕ್ಕಳ ತಪಾಸಣೆ ಪೂರ್ಣಗೊಳಿಸಲಾಗುವುದು. 6-59 ತಿಂಗಳ 52 ಲಕ್ಷ ಮಕ್ಕಳು, 5-9 ವರ್ಷದೊಳಗಿನ 58 ಲಕ್ಷ ಮಕ್ಕಳು, 10-19 ವರ್ಷ ವಯಸ್ಸಿನ 127 ಲಕ್ಷ ಹದಿಹರೆಯದವರು, 12 ಲಕ್ಷ ಗರ್ಭಿಣಿಯರು, 11 ಲಕ್ಷ ಬಾಣಂತಿಯರು ಮತ್ತು ಸಂತಾನೋತ್ಪತ್ತಿ ವಯಸ್ಸಿನ 133 ಲಕ್ಷ ಮಹಿಳೆಯರನ್ನು ತಪಾಸಣೆ ಕಾರ್ಯ ಏಪ್ರಿಲ್ ತಿಂಗಳ ಒಳಗಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಒಟ್ಟು 6 ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ಮೊದಲ ಹಂತದಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಗಾಗಿ ಸಾಮೂಹಿಕ ತಪಾಸಣೆ ನಡೆಸಲಾಗುವುದು. ಎರಡು ಮತ್ತು ಮೂರನೇ ಹಂತದಲ್ಲಿ ಮೇಲ್ವಿಚಾರಣೆ, ರಕ್ತ ಸಂವರ್ಧಿನಿ ಐಎಫ್ಎ ಪೂರಕ ಮತ್ತು ಜಂತುಹುಳು ನಿವಾರಣೆಯತ್ತ ಇಲಾಖೆ ಗಮನಹರಿಸಲಿದೆ.‌ ನಾಲ್ಕನೇ ಹಂತದಲ್ಲಿ ಮನೆಗೆ ಪಡಿತರ ಮತ್ತು ಆಹಾರ ವಿತರಣೆ ಹಾಗೂ ಪೌಷ್ಟಿಕ ಅಭಿಯಾನ, ಸಮಾಲೋಚನೆ ಸೇವೆಗಳು, ಔಷಧಿ ವಿತರಣೆ, ಆರೋಗ್ಯ ಕೌಶಲ್ಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವಕು ಮಾತನತಾಡಿ, ರಕ್ತಹೀನತೆ ಪ್ರಕರಣಗಳ ನಿಭಾಯಿಸಲು ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ತಿಳುವಳಿಕೆ ನೀಡುವ ಕುರಿತು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

SCROLL FOR NEXT