ರಾಜ್ಯ

ತೆಲಂಗಾಣ ಪತ್ರಿಕೆಗಳಲ್ಲಿ ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಗಳ ಜಾಹೀರಾತು: ನಡೆ ಸಮರ್ಥಿಸಿಕೊಂಡ ಸಿಎಂ, ಡಿಸಿಎಂ

Sumana Upadhyaya

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭಾರತೀಯ ಚುನಾವಣಾ ಆಯೋಗ (ECI) ನೋಟಿಸ್ ನೀಡಿದ ನಂತರವೂ ವಿಧಾನಸಭೆ ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ತನ್ನ ಖಾತರಿ ಯೋಜನೆಗಳ ಜಾಹೀರಾತು ನೀಡಿದ ರಾಜ್ಯ ಸರ್ಕಾರದ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. 

ಜಾಹೀರಾತುಗಳು ಬಡವರಿಗೆ ತಲುಪುತ್ತಿರುವ ಖಾತರಿ ಯೋಜನೆಗಳಲ್ಲಿ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುತ್ತವೆ ಹೊರತು  ಅವು ಮತ ಕೇಳಲು ನಾವು ಮಾಡುತ್ತಿರುವ ಪ್ರಚಾರವಲ್ಲ ಎಂದು ಸಿಎಂ ಮತ್ತು ಡಿಸಿಎಂ ಹೇಳಿದ್ದಾರೆ. ಚುನಾವಣಾ ಆಯೋಗದ ನೋಟಿಸ್‌ಗೆ ಸರ್ಕಾರ ಉತ್ತರಿಸಲಿದೆ ಎಂದು ಶಿವಕುಮಾರ್ ಹೇಳಿದರೆ, ಚುನಾವಣಾ ಆಯೋಗವು ಆಕ್ಷೇಪಿಸಿದ ನಂತರ ಜಾಹೀರಾತುಗಳನ್ನು ನಿಲ್ಲಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಸಮರ್ಥಿಸಿಕೊಂಡ ಮುಖ್ಯಮಂತ್ರಿಗಳು, ಚುನಾವಣಾ ಆಯೋಗ ನಿರ್ದೇಶನ ನೀಡಿದ ನಂತರ ಜಾಹೀರಾತುಗಳನ್ನು ನಿಲ್ಲಿಸಲಾಗಿದೆ. ಜಾಹೀರಾತಿನ ಬಗ್ಗೆ ಬಿಜೆಪಿ ಚುನಾವಣಾ ಸಮಿತಿಗೆ ದೂರು ನೀಡಿದ್ದರಿಂದ ನಮಗೆ ನೋಟಿಸ್ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 

ಮತದಾರರು ಕಾಂಗ್ರೆಸ್ ಅಥವಾ ಯಾವುದೇ ಪಕ್ಷದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಜಾಹೀರಾತುಗಳಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು. ಜಾಹೀರಾತು ನಮ್ಮ ಕೆಲಸಗಳ ವಿವರಗಳನ್ನು ಹೊಂದಿದೆ. ಅದನ್ನು ಹೇಗೆ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಎಂದು ಕೇಳಿದರು. 

ಕರ್ನಾಟಕ ಸರ್ಕಾರ ಖಾತರಿ ಯೋಜನೆಗಳನ್ನು ಜಾರಿಗೊಳಿಸಿಲ್ಲ ಎಂದು ಬೇರೆ ಪಕ್ಷಗಳ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು. ನಾವು ತೆಲಂಗಾಣ, ತಮಿಳುನಾಡು ಮತ್ತು ಇತರ ರಾಜ್ಯಗಳಿಗೆ ಹೋಗುವ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿದ್ದೇವೆ. ನಾವು ಮತ ಕೇಳಿಲ್ಲ. ನಾವು ಇಸಿಐ ನೋಟಿಸ್‌ಗೆ ಉತ್ತರಿಸುತ್ತೇವೆ, ಎಂದರು. 

ಚುನಾವಣೆ ನಡೆಯಲಿರುವ ತೆಲಂಗಾಣದಲ್ಲಿ ಕರ್ನಾಟಕ ಸರ್ಕಾರ ಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವುದನ್ನು ಚುನಾವಣಾ ಸಮಿತಿ ಗಂಭೀರವಾಗಿ ಪರಿಗಣಿಸಿದೆ. ಇದು ಚುನಾವಣಾ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆ ಎಂದು ಆಯೋಗ ಆಕ್ಷೇಪಿಸಿದೆ. 

SCROLL FOR NEXT