ರಾಜ್ಯ

ಬೆಂಗಳೂರು: ಪ್ಯಾಲೇಸ್ತೀನ್ ಪರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ

Manjula VN

ಬೆಂಗಳೂರು: ಇಸ್ರೇಲ್ ದಾಳಿಯಿಂದ ಪ್ಯಾಲೇಸ್ತೀನ್‌ನಲ್ಲಿ ಉಂಟಾಗಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ನಗರದ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಜೆಪಿ ನಗರದ ರಂಗಶಂಕರದಲ್ಲಿ ಗಾಯಕಿ ಎಂ.ಡಿ.ಪಲ್ಲವಿ ಸೇರಿದಂತೆ ಹಲವರ ನೇತೃತ್ವದಲ್ಲಿ ಪ್ಯಾಲೇಸ್ತೀನ್ ಪರ ಕಿರು ನಾಟಕ, ಕವನ ವಾಚನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಭದ್ರತಾ ದೃಷ್ಟಿಯಿಂದ ದಕ್ಷಿಣ ವಿಭಾಗದ ಪೊಲೀಸರು ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದ್ದರು ಎಂದು ತಿಳಿದುಬಂದಿದೆ.

ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿರುವ ಹಿನ್ನೆಲೆಯಲ್ಲಿ ಕಲಾವಿದ ರಮಣೀಕ್ ಸಿಂಗ್ ಅವರು ಪೊಲೀಸರ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಖ್ಯಾತ ರಂಗಭೂಮಿ ಕಲಾವಿದರಾದ ಪಲ್ಲವಿ ಎಂ.ಡಿ ಮತ್ತು ಶ್ವೇತಾಂಶು ಬೋರಾ ಜೊತೆ ನಾವು ಕವಿತೆಗಳನ್ನು ಓದಲು ನಿರ್ಧರಿಸಿದ್ದೆವು. ಈ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ರಂಗಶಂಕರದಂತಹ ಸಂಸ್ಥೆಯನ್ನು ಬೆದರಿಸುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಮೇಲಿನ ತನ್ನ ಬದ್ಧತೆ ಕೊರತೆಯನ್ನು ಮತ್ತೊಮ್ಮೆ ತೋರಿಸಿದೆ,

ಪ್ಯಾಲೇಸ್ತೀನ್ ಜೊತೆ ಒಗ್ಗಟ್ಟು ಪ್ರದರ್ಶಿಸಿ ಒಂದು ಸಣ್ಣ ನಾಟಕ ಮಾಡಲು ಮತ್ತು ಕವನ ವಾಚಿಸಲು ನಾವು ನಿರ್ಧಿಸಿದ್ದೆವು. ನಮ್ಮದು ಒಳಾಂಗಣ ಕಾರ್ಯಕ್ರಮವಾಗಿದೆ. ಇದಕ್ಕೆ ಪೊಲೀಸರ ಅನುಮತಿ ಪಡೆಯುವ ಅಗತ್ಯ ಇಲ್ಲ. ಆದರೂ, ಪೊಲೀಸರು ನಮ್ಮ ಕಾರ್ಯಕ್ರಮದ ಸಂಪೂರ್ಣ ಮಾಹಿತಿ, ಕಲಾವಿದರ ವಿವರಗಳು ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಕೇಳಿದ್ದರು. ನಾವು ಆಧಾರ್ ಕಾರ್ಡ್ ಪ್ರತಿಗಳನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ಒದಗಿಸಿದ್ದೇವೆ. ಆದರೆ, ಅವರು ರಂಗಶಂಕರದ ಮೇಲೆ ಒತ್ತಡ ಹೇರಿದ್ದಾರೆ. ಪರಿಣಾಮ ಕೊನೆ ಗಳಿಗೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ,

ಪೊಲೀಸರು ಒತ್ತಡ ಹೇರಿದ ಕಾರಣ ಕಾರ್ಯಕ್ರಮ ರದ್ದಾಗಿದೆ. ಆದರೆ, ಒಂದಂತು ತಿಳಿದುಕೊಳ್ಳಿ, ಇದು ಒಳಾಂಗಣ ಕಾರ್ಯಕ್ರಮ ಪೊಲೀಸರ ಅನುಮತಿ ಅಗತ್ಯವಿಲ್ಲ. ಬೆಂಗಳೂರು ಪೊಲೀಸರು ಮತ್ತು ಕರ್ನಾಟಕ ಸರ್ಕಾರಕ್ಕೆ ನಾಚಿಕೆಯಾಗಬೇಕು. ದಯವಿಟ್ಟು ಇದನ್ನು ವ್ಯಾಪಕವಾಗಿ ಪ್ರಚಾರ ಮಾಡಿ. ಪ್ರೇಕ್ಷಕರನ್ನು ಸೇರಿಸಲು ನಮಗೆ ಸಹಾಯ ಮಾಡಿ. ನಾವು ಪ್ಯಾಲೇಸ್ತೀನ್ ಬಗ್ಗೆ ಕವನ ಓದುತ್ತೇವೆ. ಕಿರು ನಾಟಕ ಪ್ರದರ್ಶನ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

SCROLL FOR NEXT