ರಾಜ್ಯ

ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ: ಗ್ಯಾರಂಟಿ ಯೋಜನೆಗಳ ಬಗ್ಗೆ ನಾರಾಯಣ ಮೂರ್ತಿ ಆಕ್ಷೇಪಕ್ಕೆ ಪ್ರಿಯಾಂಕ್ ಖರ್ಗೆ ತರಾಟೆ

Nagaraja AB

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರನ್ನು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ತರಾಟೆಗೆ ತೆಗೆದುಕೊಂಡಿದ್ದಾರೆ. 

ಬೆಂಗಳೂರು ಟೆಕ್ ಶೃಂಗಸಭೆ ಭಾಗವಾಗಿ ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ಅವರು, ಎಷ್ಟು ಜನರು ಬಡತನ ರೇಖೆಗಿಂತ ಕೆಳಕ್ಕೆ ತಳ್ಳಲ್ಪಟ್ಟಿದ್ದಾರೆ ಮತ್ತು "ಶ್ರೀಮಂತರು ಹೇಗೆ ಶ್ರೀಮಂತರಾಗುತ್ತಿದ್ದಾರೆ ಮತ್ತು ಬಡವರು ಬಡವರಾಗಿಯೇ ಇದ್ದಾರೆ ಎಂಬುದನ್ನು ನೋಡಬೇಕು ಎಂದು ಹೇಳಿದರು.

‘‘ನಾರಾಯಣ ಮೂರ್ತಿ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ನೀಡಿದ್ದಾರೆ. ಅವರು ಇನ್ಫೋಸಿಸ್ ಫೌಂಡೇಶನ್ ಮೂಲಕ ಪರೋಪಕಾರಿ ಕೆಲಸ ಮಾಡಿದ್ದಾರೆ. ಅವರು ನೀಡುತ್ತಿರುವ ಸೇವೆಯ ಜೊತೆಗೆ ನಾಗರಿಕ ಜವಾಬ್ದಾರಿಯೂ ಇರಬೇಕು.
ನಾಗರಿಕ ಹಕ್ಕುಗಳ ಬಗ್ಗೆ ಮಾತನಾಡುವಾಗ, ನಾಗರಿಕ ಜವಾಬ್ದಾರಿಗಳು ಮತ್ತು ಕರ್ತವ್ಯಗಳ ಬಗ್ಗೆಯೂ ಚರ್ಚಿಸಬೇಕು. ಅದರಂತೆ ಸರ್ಕಾರ ಜನರಿಗೆ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಪ್ರೋತ್ಸಾಹದ ರೂಪದಲ್ಲಿ ನೀಡಬೇಕು" ಎಂದು ಖರ್ಗೆ ಹೇಳಿದರು.

"ಗ್ಯಾರಂಟಿ ಯೋಜನೆಗಳೊಂದಿಗೆ ಕುಟುಂಬಗಳು ವರ್ಷಕ್ಕೆ 1.20 ಲಕ್ಷ ರೂ. ಉಳಿಸಲು ಸಮರ್ಥವಾಗಿವೆ. ಅವರು ಅದನ್ನು ಮಕ್ಕಳಿಗೆ ಪೌಷ್ಟಿಕಾಂಶದ ಆಹಾರಕ್ಕಾಗಿ ಖರ್ಚು ಮಾಡುತ್ತಾರೆ ಮತ್ತು ಅವರನ್ನು ಟ್ಯೂಷನ್‌ಗೆ ಕಳುಹಿಸುತ್ತಾರೆ. ಗ್ಯಾರಂಟಿ ಯೋಜನೆಗಳು ಒಂದು ವರ್ಷದ ನಂತರ ಜನರಿಗೆ ಹೇಗೆ ಪ್ರಯೋಜನವಾಗಿದೆ ಎಂಬುದನ್ನು ನಾವು ಅಧ್ಯಯನ ಮಾಡಬೇಕು ಎಂದು ಅವರು ತಿಳಿಸಿದರು. 

ಸಹಾನುಭೂತಿಯ ಬಂಡವಾಳಶಾಹಿ ಮತ್ತು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಬಗ್ಗೆ ನಾರಾಯಣ ಮೂರ್ತಿ ಮಾತನಾಡಿರುವುದನ್ನು ಗಮನಿಸಿದ ಸಚಿವರು, "ಎಷ್ಟು ಕಾರ್ಪೊರೇಟ್‌ಗಳು ಇದನ್ನು ಮಾಡುತ್ತಿದ್ದಾರೆ? ದೇಶದಲ್ಲಿ ಅನೇಕ ಬಂಡವಾಳಶಾಹಿಗಳಿದ್ದಾರೆ, ಅವರಲ್ಲಿ ಎಷ್ಟು ಮಂದಿ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದ್ದಾರೆ? ಎಲ್ಲರೂ ಮಾಡುತ್ತಾರೆ ಎಂಬುದು ನನ್ನ ಅಭಿಪ್ರಾಯವಲ್ಲಾ. ಆಂಗ್ಲ ಮಾಧ್ಯಮ ಶಾಲೆಗಳ ಅಗತ್ಯವಿದ್ದರೂ ಸ್ಥಳೀಯ ಭಾಷೆಗೆ ಪ್ರಾಮುಖ್ಯತೆ ನೀಡಬೇಕು. ನಮ್ಮ ರಾಜ್ಯವು ಪ್ರತಿಭಾನ್ವಿತರನ್ನು ಉತ್ಪಾದಿಸುತ್ತಿದೆ ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡುತ್ತಾ, ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಬುಧವಾರ ಮಾತನಾಡಿದ್ದ ನಾರಾಯಣಮೂರ್ತಿ ಏನನ್ನೂ ಉಚಿತವಾಗಿ ನೀಡಬಾರದು ಮತ್ತು ಜನರು ಪಡೆಯುವುದಕ್ಕೆ ಜವಾಬ್ದಾರರಾಗಬೇಕು ಎಂದು ಹೇಳಿದ್ದರು. ಸರ್ಕಾರದಿಂದ ಸಹಾಯಧನ ನೀಡುವುದನ್ನು ಅವರು ವಿರೋಧಿಸಿದ್ದರು. ಚೀನಾವನ್ನು ಹಿಂದಿಕ್ಕಲು ಇಂಗ್ಲಿಷ್ ಮಾಧ್ಯಮ ಶಾಲೆಗಳ ಸ್ಥಾಪನೆ, ಮೂರು ಪಾಳಿ ಕೆಲಸ ಮತ್ತು ತ್ವರಿತ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ ಅಗತ್ಯ ಎಂದು ಅವರು ತಿಳಿಸಿದರು. 

SCROLL FOR NEXT