ರಾಜ್ಯ

ಗೃಹ ಇಲಾಖೆಗೆ ಪತ್ರ: ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ

Nagaraja AB

ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಪ್ರಕರಣಗಳಲ್ಲಿ ಭಾಗಿಯಾಗಿರುವವರ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ಗೃಹ ಇಲಾಖೆಗೆ ಪತ್ರ ಬರೆದಿರುವುದನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬುಧವಾರ ಸಮರ್ಥಿಸಿಕೊಂಡಿದ್ದಾರೆ.
 
ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧದ ಕೇಸ್ ಗಳನ್ನು ಕೈ ಬಿಡುವಂತೆ ಗೃಹ ಇಲಾಖೆಗೆ ಉಪ ಮುಖ್ಯಮಂತ್ರಿ ಪತ್ರ  ಬರೆದಿದ್ದಾರೆ ಎಂಬ ಬಿಜೆಪಿ ಆರೋಪ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಕೋಮು ಸಂಘರ್ಷ ಪ್ರಕರಣಗಳಲ್ಲಿ ಭಾಗಿಯಾಗಿರುವ ಹಲವು ಜನರ ವಿರುದ್ಧದ ಪ್ರಕರಣಗಳನ್ನು ಬಿಜೆಪಿ ಸರ್ಕಾರ ಕೈಬಿಟ್ಟಿತ್ತು. ಅಲ್ಲದೇ ರೌಡಿಶೀಟರ್ ಪಟ್ಟಿಯಿಂದ ಹೆಸರನ್ನು ತೆಗೆದುಹಾಕಿತ್ತು ಎಂದು ಹೇಳಿದರು. 

ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ನೇಮಿಸಲು ಸಾಧ್ಯವಾಗದ ಬಿಜೆಪಿ ನಾಯಕರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ಎಂಬುದು ಜನರಿಗೆ ತಿಳಿದಿದೆ ಎಂದರು. 

ಬಿಜೆಪಿ ಮುಖಂಡರಾದ ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಹಲವರು ಪ್ರಕರಣಗಳನ್ನು ಕೈಬಿಡುವಂತೆ ಗೃಹ ಇಲಾಖೆಗೆ ಪತ್ರ ಬರೆದಿದ್ದರು. 2023ರ ಜನವರಿ ಮತ್ತು ಫೆಬ್ರವರಿಯಲ್ಲಿ ರೌಡಿಶೀಟರ್‌ಗಳ ಪಟ್ಟಿಯಿಂದ 7,361 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿದರು. 

ಅಮಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಪರಿಶೀಲನೆ ನಡೆಸುತ್ತಿದ್ದು, ಪ್ರಕರಣದ ವಿವರಗಳನ್ನು ಪರಿಶೀಲಿಸುವ ಅಧಿಕಾರಿಗಳ ಶಿಫಾರಸುಗಳನ್ನು ಒಳಗೊಂಡಂತೆ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿವಕುಮಾರ್ ತಿಳಿಸಿದರು. 

ಜಾತಿ ಗಣತಿ ವರದಿ ಕುರಿತು ಸರಕಾರ ಶೀಘ್ರವೇ ತೀರ್ಮಾನಿಸಲಿದೆ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ನಿಲುವು ತಳೆದಿದ್ದು, ಸರ್ಕಾರವೂ ಅದಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

SCROLL FOR NEXT