ಸಾಂದರ್ಭಿಕ ಚಿತ್ರ 
ರಾಜ್ಯ

ಕುಮಟಾ: ವ್ಯಕ್ತಿ ಕೊಲೆ ಪ್ರಕರಣ ಬೇಧಿಸಲು ನೆರವಾದ ಕೆಎಸ್ ಆರ್ ಟಿಸಿ ಬಸ್ ಟಿಕೆಟ್; ಹತ್ಯೆಯ ಹಿಂದಿನ ರೂವಾರಿ ಯಾರು?

ಕುಮಟಾದಲ್ಲಿ ನಡೆದ  ವ್ಯಕ್ತಿಯೊಬ್ಬರ ಕೊಲೆ ಪ್ರಕರಣವನ್ನು ಭೇದಿಸಲು ಮೂರು ದಿನಗಳ ಹಿಂದಿನ ಹಳೆಯ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪೊಲೀಸರಿಗೆ ಸಹಾಯ ಮಾಡಿದೆ.

ಕುಮಟಾ: ಕುಮಟಾದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸಲು ಮೂರು ದಿನಗಳ ಹಿಂದಿನ ಹಳೆಯ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪೊಲೀಸರಿಗೆ ಸಹಾಯ ಮಾಡಿದೆ.

ಸೆ.30ರಂದು ಶಿರಸಿ-ಕುಮಟಾ ಹೆದ್ದಾರಿಯ ದೇವಿಮನೆ ಘಾಟ್‌ನ ದೇವಸ್ಥಾನದ ಹಿಂಭಾಗದಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು, ಮೃತನನ್ನು ಬಶೀರ್ (40) ಎಂದು ಗುರುತಿಸಲಾಗಿದ್ದು, ಚೂಪಾದ ಆಯುಧಗಳಿಂದ ಚುಚ್ಚಿ ಕೊಲೆ ಮಾಡಲಾಗಿತ್ತು.

ತನಿಖೆ ಆರಂಭಿಸಿದ ಕುಮಟಾ ಪೊಲೀಸರಿಗೆ ಪ್ರಾರಂಭದಲ್ಲಿ ಯಾವುದೇ ಸುಳಿವು ಸಿಗಲಿಲ್ಲ.  ಆದರೆ ಬಶೀರ್ ಬರ್ಬರವಾಗಿ ಹತ್ಯೆಯಾಗಿರುವುದು ದೃಢಪಟ್ಟಿತ್ತು. ಮೃತ ವ್ಯಕ್ತಿಯ ಪಾಕೆಟ್ ನಲ್ಲಿ ಸಿಕ್ಕ ಕೆಎಸ್ ಆರ್ ಟಿಸಿ ಬಸ್ ಟಿಕೆಟ್ ನಿಂದ ಆತ ಇತ್ತೀಚೆಗೆ ಗಜೇಂದ್ರ ಗಢಕ್ಕೆ ಭೇಟಿ ನೀಡಿದ್ದು ದೃಢವಾಗಿತ್ತು, ಆತ ಒಬ್ಬನೇ ಗಜೇಂದ್ರ ಗಢಕ್ಕೆ ಹೋಗಿರಲಿಲ್ಲ. ಮತ್ತೊಬ್ಬರು ಕೂಡ ಆತನ ಜೊತೆ ಪ್ರಯಾಣಿಸಿದ್ದರು. ಪೊಲೀಸರು ತನಿಖೆ ನಡೆಸಿದ ವೇಳೆ ಆತನ ಜೊತೆಗೆ ಪತ್ನಿಯೂ ಪ್ರಯಾಣಿಸಿರುವುದು ಬೆಳಕಿಗೆ ಬಂತು. ನಂತರ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮುಸಿಗೆರೆಗೆ ಪೊಲೀಸ್ ತಂಡ ತೆರಳಿ ವಿಚಾರವನ್ನು ದೃಢ ಪಡಿಸಿಕೊಂಡಿತ್ತು.

ಬಶೀರ್ ಪತ್ನಿ ರಜ್ಮಾ ಆತನೊಂದಿಗೆ ತೆರಳಿದ್ದಳು. ರಜ್ಮಾಗೆ ಬಶೀರ್ ಇಷ್ಟವಿರಲಿಲ್ಲ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಕೆಲ ವರ್ಷಗಳ ಹಿಂದೆ  ಅವರಿಬ್ಬರ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೆಲವು ತಿಂಗಳ ಹಿಂದೆ ಕುರಿಗಳನ್ನು ಮಾರಲು ಹೋಗಿದ್ದಾಗ ಬಶೀರ್ ಗೆ ಬಾದಾಮಿಯಲ್ಲಿ ಪರಶುರಾಮ ಎಂಬಾತನ ಪರಿಚಯವಾಗಿತ್ತು. ಬಶೀರ್ ಸೋದರ ಸಂಬಂಧಿ ಕಾಸಿಂ ಎಂಬಾತನಿಂದ ಪರಶುರಾಮನ ಜೊತೆ ಪರಿಚಯವಾಗಿತ್ತು. ನಂತರ ಆತನನ್ನು ಬಶೀರ್ ತನ್ನ ಪತ್ನಿಗೆ ಪರಿಚಯಿಸಿದ್ದ.

ರಜ್ಮಾಗೆ ಪರಶುರಾಮ್ ಜೊತೆ ಅನೈತಿಕ ಸಂಬಂಧವಿತ್ತು, ಇದಕ್ಕೆ ಬಶೀರ್ ಆಕ್ಷೇಪ ವ್ಯಕ್ತ ಪಡಿಸಿದ್ದ, ಈ ವಿಷಯವಾಗಿ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು, ಪರಶುರಾಮನ  ಸಹಾಯ ಪಡೆದು ಬಶೀರ್ ನನ್ನು ಕೊಲೆ ಮಾಡಲು ರಜ್ಮಾ ಸೆಪ್ಟಂಬರ್ 26 ರಂದು 10 ಸಾವಿರ ರು ಹಣ ನೀಡಿದ್ದಳು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ ಟಿ ಜಯಕುಮಾರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.

ಮರ್ಡರ್ ಪ್ಲಾನ್ ಕಾರ್ಯಗತಗೊಳಿಸಲು  ಪರುಶುರಾಮ್ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ. ಆರೋಪಿಯು ತನ್ನ ಸ್ನೇಹಿತ ಆದೇಶ್‌ನನ್ನು ಭೇಟಿಯಾಗಲು ಬಶೀರ್ ಮತ್ತು ಇನ್ನೊಬ್ಬ ಸ್ನೇಹಿತ ರವಿಯ ಜೊತೆ ಮಂಗಳೂರಿಗೆ ಹೋಗಿದ್ದ.  ಅಲ್ಲಿ ಆದೇಶ್‌ನೊಂದಿಗೆ ಉಳಿದುಕೊಂಡು ಅಲ್ಲಿಂದ ಒಟ್ಟಿಗೆ  ಪಣಂಬೂರು ಬೀಚ್ ಗೆ ತೆರಳಿ  ಬಶೀರ್‌ನನ್ನು ಕೊಲೆ ಮಾಡುವ ಯೋಜನೆಯನ್ನು ಪರಶುರಾಮ್ ಹೇಳಿದ್ದ. ಆದರೆ  ಮಂಗಳೂರಿನಲ್ಲಿ ಮಾಡಬೇಡಿ ಎಂದು ಸಲಹೆ ನೀಡಿದ ಆದೇಶ್  ದೇವಿಮನೆ ಘಾಟ್‌ ದೇವಸ್ಥಾನದ ಹಿಂಭಾಗಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ.

ಅವರೆಲ್ಲರನ್ನು ಬಸ್ ಹತ್ತಿಸಿ ದೇವಸ್ಥಾನದ ಬಳಿ ಇರುವ ದೇವಿಮನೆ ಘಾಟ್‌ನಲ್ಲಿ ಇಳಿಸುವಂತೆ  ಬಸ್  ಚಾಲಕ ಮತ್ತು ಕಂಡಕ್ಟರ್‌ಗೆ ತಿಳಿಸಿದರು. ಅದರಂತೆ ಸೆ.29ರಂದು ದೇವಸ್ಥಾನದ ಬಳಿ ಇಳಿದರು’ ಎಂದು ಹೆಚ್ಚುವರಿ ಎಸ್ಪಿ ಜಯಕುಮಾರ್ ವಿವರಿಸಿದರು. ಆರೋಪಿಗಳು ಬಶೀರ್‌ಗೆ ಚೆನ್ನಾಗಿ ಮದ್ಯ ಕುಡಿಸಿದ್ದಾರೆ. ನಂತರ ಆತನನ್ನು ಕೊಲೆ ಮಾಡಿ ಶವವನ್ನು ಅಲ್ಲಿ ಬಿಸಾಡಿದ್ದಾರೆ, ಮರುದಿನ ಬೆಳಗ್ಗೆ ಶವ ಪತ್ತೆಯಾಗಿದೆ.

ಪ್ರಕರಣವನ್ನು ಅಲ್ಪಾವಧಿಯಲ್ಲಿ ಭೇದಿಸಿದ ಪೊಲೀಸ್ ಇನ್ಸ್‌ಪೆಕ್ಟರ್ ತಿಮ್ಮಪ್ಪ, ಸಬ್ ಇನ್‌ಸ್ಪೆಕ್ಟರ್ ನವೀನ್ ನಾಯ್ಕ್ ಮತ್ತು ಇತರರ ನೇತೃತ್ವದ ತಂಡವನ್ನು ಪೊಲೀಸ್ ಉನ್ನತಾಧಿಕಾರಿಗಳು ಅಭಿನಂದಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪರಸ್ಪರ ನಂಬಿಕೆ, ಗೌರವದ ಆಧಾರದ ಮೇಲೆ ಸಂಬಂಧ ಮುಂದುವರಿಸಲು ಬದ್ಧ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪ್ರಧಾನಿ ಮೋದಿ

SCO ಶೃಂಗಸಭೆ: ಪುಟಿನ್ ಭೇಟಿಗೂ ಮುನ್ನ ಉಕ್ರೇನ್ ಜೊತೆ ಮೋದಿ ಮಾತು; ರಷ್ಯಾಕ್ಕೆ ಸೂಕ್ತ ಸಂದೇಶ ನೀಡಲು ಭಾರತ ಸಿದ್ಧ!

ಮತದಾರರ ಅಧಿಕಾರ ಯಾತ್ರೆಗೆ ಪ್ರತ್ಯೇಕ ತಂಡವಾಗಿ ತೆರಳಿದ CM-DCM: ಕಾಂಗ್ರೆಸ್ ನಲ್ಲಿ ಬದಲಾದ ಸಮೀಕರಣ; ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ!

ಟ್ರಂಪ್ ಸುಂಕಾಸ್ತ್ರಕ್ಕೆ ಸೆಡ್ಡು: ಇಂದು ಚೀನಾ ಅಧ್ಯಕ್ಷ ಕ್ಸಿ ಜೊತೆಗೆ ಪ್ರಧಾನಿ ಮೋದಿಯ ಮಹತ್ವದ ಭೇಟಿ!

Israeli Strike: ಯೆಮೆನ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ, ಇರಾನ್ ಬೆಂಬಲಿತ ಹೌತಿ ಪ್ರಧಾನಿ, ಹಲವು ಸಚಿವರ ಹತ್ಯೆ!

SCROLL FOR NEXT