ರಾಜ್ಯ

ಬರಕ್ಕೆ ಬೆಳೆಗಳು ನಾಶ: ಬಳ್ಳಾರಿಗೆ ಭೇಟಿ, ರೈತರ ಸಂಕಷ್ಟ ಆಲಿಸಿದ ಕೇಂದ್ರದ ತಂಡ

Manjula VN

ಬಳ್ಳಾರಿ: ಕೇಂದ್ರ ಬರ ಪರಿಹಾರ ತಂಡವು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಗ್ರಾಮದ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಬರ ಸಮೀಕ್ಷೆ ನಡೆಸಿತು.

ಕೇಂದ್ರ ಕುಡಿಯುವ ನೀರು ಹಾಗು ನೈರ್ಮಲ್ಯ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ (ಐ.ಎ.ಎಸ್) ನೇತೃತ್ವದ ನಾಲ್ವರು ಐಎಎಸ್ ಅಧಿಕಾರಿಗಳನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡವು ಸಂಡೂರು ತಾಲೂಕಿನ ಕೆಲ ಗ್ರಾಮ ವ್ಯಾಪ್ತಿಯ ಕೃಷಿ ಭೂಮಿಗಳಿಗೆ ಭೇಟಿ ನೀಡಿ ಬರ ಸಮೀಕ್ಷೆ ನಡೆಸಿತು. ಈ ವೇಳೆ ರೈತರ ಸಮಸ್ಯೆಗಳನ್ನು ಆಲಿಸಿದ ತಂಡ, ಭರವಸೆ ಕಳೆದುಕೊಳ್ಳದಂತೆ ಧೈರ್ಯ ಹೇಳಿದರು.

ಬರಗಾಲದಂತಹ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು.

ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಅಧಿಕಾರಿಗಳ ಭೇಟಿಯನ್ನು ಖಚಿತಪಡಿಸಿದ್ದಾರೆ.

ಜಿಲ್ಲೆ ಭೇಟಿ ನೀಡಿದ್ದ ಕೇಂದ್ರದ ತಂಡಕ್ಕೆ ಜಿಲ್ಲಾಡಳಿತದಿಂದ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒದಗಿಸಲಾಗಿದೆ. “ಕೇಂದ್ರ ಬರ ಅಧ್ಯಯನ ಸಮಿತಿಯು ಬಂಡ್ರಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ನಡೆಸಿತು. ಬರ ಪರಿಸ್ಥಿತಿಯು ಮಹಿಳಾ ರೈತರ ಜೀವನೋಪಾಯದ ಮೇಲೆ ಯಾವ ರೀತಿಯ ಪರಿಣಾಮ ಬೀರಿದೆ ಎಂಬುದನ್ನು ವಿವರಿಸಲಾಯಿತು. ನಂತರ ಶ್ರೀರಾಮಶೆಟ್ಟಿ ಗ್ರಾಮದ ರೈತರೊಬ್ಬರ ಮನೆಗೆ ಅಧಿಕಾರಿಗಳು ಭೇಟಿ ನೀಡಿದರು ಎಂದು ಮಾಹಿತಿ ನೀಡಿದ್ದಾರೆ.

ಬೆಳೆ ಸಾಲ ತೀರಿಸಲಾಗದೆ ಈ ರೈತ ತನ್ನ ಜೀವನವನ್ನೇ ಅಂತ್ಯಗೊಳಿಸಿದ್ದಾನೆ. ಸಮೀಕ್ಷೆ ಬಳಿಕ ಅಗತ್ಯ ಕ್ರಮ ಕೈಗೊಂಡು ಕೇಂದ್ರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ತಂಡದ ಭೇಟಿ ರೈತರಿಗೆ ಧೈರ್ಯ ತುಂಬಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

SCROLL FOR NEXT