ಬೆಂಗಳೂರು: ಅತ್ತಿಬೆಲೆ ಪ್ರಕರಣದಲ್ಲಿ ತಹಶೀಲ್ದಾರ್, ಇನ್ಸ್ ಪೆಕ್ಟರ್ ಮತ್ತು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಅಮಾನತಿಗೆ ಸಿಎಂ ಸೂಚನೆ ನೀಡಿದ್ದಾರೆ.
ಪ್ರಕರಣದ ಸಂಬಂಧ ಇಂದು ಸಭೆ ನಡೆಸಿದ ಸಿಎಂ, ಈ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳೂ ಎಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.
ಅತ್ತಿಬೆಲೆ ಪಟಾಕಿ ದುರಂತವಾದ ಮಳಿಗೆಗೆ ಸಂಬಂಧಿಸಿದಂತೆ ಸರ್ಕಲ್ ಇನ್ಸ್‌ಪೆಕ್ಟರ್ ವರದಿ, ಛಾಯಾಚಿತ್ರಗಳೊಂದಿಗೆ ಚಕ್ಕುಬಂದಿ ನಿಗದಿ ಮಾಡಿ ವರದಿ ಸಲ್ಲಿಸಿದ್ದಾರೆ. ಪೊಲೀಸ್ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಪರವಾನಗಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ತಹಸೀಲ್ದಾರರಿಂದಲೂ ವರದಿ ಪಡೆದಿದ್ದಾರೆ ಎಂದು ಅಧಿಕಾರಿಗಳು ಸಿಎಂ ಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ: ರಾಜಕಾರಣಿಗಳ ಪ್ರಭಾವ, ಸೀಜ್ ಆಗಿದ್ದ 2-3 ಗಂಟೆಗಳಲ್ಲೇ ಓಪನ್ ಆಗಿದ್ದ ಗೋದಾಮು!
ಸ್ಫೋಟಕ ಪದಾರ್ಥಗಳ ಕಾಯ್ದೆಯಡಿ ಪರವಾನಗಿ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು. ಹದಿನಾಲ್ಕು ಜನರ ಜೀವಕ್ಕೆ ಯಾರು ಹೊಣೆಗಾರರು. ಕಾಯ್ದೆ ಓದಿದ್ದೀರಾ? ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿಯಿದೆಯೇ ಎಂದು ಜಿಲ್ಲಾಧಿಕಾರಿಗಳು ಪರಿಶೀಲಿಸಬೇಕು ಎಂದು ಸಿಎಂ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಲು ಸೂಚಿಸಿದರು.
ಈ ಪ್ರಕರಣದಲ್ಲಿ ಗೋಡೌನ್‌ಗೆ ಅನುಮತಿ ನೀಡಿರಲಿಲ್ಲ. ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದಿದ್ದಾರೆ. ರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು ಎಂದು ಸಿಎಂ ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ರಾಜಕೀಯ ಸಮಾವೇಶಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು.