ರಾಜ್ಯ

ಬಿಜೆಪಿಯದ್ದು ಆಧಾರರಹಿತ ಆರೋಪ ಎಂದ ಸಿಎಂ; ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಐಟಿ ದಾಳಿ ನಡೆಯುವುದಿಲ್ಲ ಎಂದ ಡಿಸಿಎಂ

Sumana Upadhyaya

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಗುರುವಾರದಿಂದ ನಿರಂತರವಾಗಿ ಐಟಿ ಇಲಾಖೆ ಅಧಿಕಾರಿಗಳಿಂದ ಭ್ರಷ್ಟರ ಮೇಲೆ ದಾಳಿ ನಡೆಯುತ್ತಿದ್ದು ಈ ವೇಳೆ ಕೋಟಿಗಟ್ಟಲೆ ಹಣ ಸಿಕ್ಕಿದೆ.

ಮುಂಬರುವ ಪಂಚರಾಜ್ಯ ಚುನಾವಣೆಗೆ ಖರ್ಚು ಮಾಡಲು ರಾಜ್ಯ ಕಾಂಗ್ರೆಸ್ ನಿಂದ ಪೂರೈಕೆಯಾಗುತ್ತಿರುವ ಹಣವಿದು, ಚುನಾವಣೆಗೆ ಕರ್ನಾಟಕ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಬಿಜೆಪಿ ನಾಯಕ ಅಶ್ವಥ್ ನಾರಾಯಣ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿಂದು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇವೆಲ್ಲಾ ಆಧಾರರಹಿತ ಆರೋಪಗಳು. ನಾವು ಯಾವ ರಾಜ್ಯಗಳಿಗೂ ಚುನಾವಣೆ ಖರ್ಚಿಗೆ ಹಣ ಕಳುಹಿಸುವುದಿಲ್ಲ, ಅವರು ಕೇಳುವುದೂ ಇಲ್ಲ, ನಾವು ಕಳುಹಿಸುವುದೂ ಇಲ್ಲ. ಇಲ್ಲಿಂದ ಹಣ ಹೋಗುತ್ತಿದೆ ಎಂದು ಹೇಳುವುದಕ್ಕೆ ಅವರು ನೋಡಿದ್ದಾರೆಯೇ ಎಂದು ಮರು ಪ್ರಶ್ನಿಸಿದರು.

ಡಿಸಿಎಂ ಡಿ ಕೆ ಶಿವಕುಮಾರ್, ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯುತ್ತಿದೆ, ರಾಜಕೀಯ ದುರುದ್ದೇಶದಿಂದಲೇ ಈ ರೀತಿ ಐಟಿ ದಾಳಿ ನಡೆಯುತ್ತದೆ. ನಮಗೂ ಗೊತ್ತಿದೆ, ಎಲ್ಲಾ ರಾಜ್ಯಗಳಲ್ಲಿ ಏನು ನಡೆಯುತ್ತಿದೆ ಎಂದು ನಮಗೂ ಗೊತ್ತಿದೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಐಟಿ ದಾಳಿ ನಡೆಯುವುದಿಲ್ಲ ಎಂದರು.

ಬಿಜೆಪಿ ನಾಯಕರ ಆರೋಪಗಳಿಗೆಲ್ಲ ಉತ್ತರ ಕೊಡುವ ಅಗತ್ಯ ನನಗಿಲ್ಲ. ಹಾದಿಬೀದಿಯಲ್ಲಿ ಹೋಗುವವರ ಮಾತುಗಳಿಗೆ ಬೆಲೆ ನೀಡಬೇಕೆ ಎಂದು ಡಿ ಕೆ ಶಿವಕುಮಾರ್ ಕೇಳಿದರು. 

SCROLL FOR NEXT