ರಾಜ್ಯ

ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳ; ಪೂರ್ಣ ಸಾಮರ್ಥ್ಯದಲ್ಲಿ ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಕಾರ್ಯನಿರ್ವಹಣೆ

Ramyashree GN

ವಿಜಯಪುರ: ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಹೆಚ್ಚಳ ಉಂಟಾಗಿದ್ದು, ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ (ಎನ್‌ಟಿಪಿಸಿ) ಕೂಡಗಿ ಸ್ಥಾವರ ಇದೀಗ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದ ಏಕೈಕ ಮೆಗಾ ಥರ್ಮಲ್ ವಿದ್ಯುತ್ ಉತ್ಪಾದನಾ ಘಟಕ ಇದಾಗಿದೆ.

ಕಳೆದ ಮೂರ್ನಾಲ್ಕು ದಿನಗಳಲ್ಲಿ 800 ಮೆಗಾವ್ಯಾಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಮೂರು ಘಟಕಗಳು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. 

ಸ್ಥಾವರದ ಒಟ್ಟು ಸಂಯೋಜಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2,400 ಮೆಗಾವ್ಯಾಟ್ ಆಗಿದ್ದು, ಸ್ಥಾವರವು 2,250 ಮೆಗಾವ್ಯಾಟ್ ಅನ್ನು ವಾಣಿಜ್ಯ ಬಳಕೆಗೆ ಪೂರೈಸುತ್ತಿದೆ ಮತ್ತು ಉಳಿದ 150 ಮೆಗಾವ್ಯಾಟ್ ಅನ್ನು ಸ್ಥಾವರವೇ ತನ್ನ ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುತ್ತಿದೆ.

ಈ ವರ್ಷ ದುರ್ಬಲ ಮುಂಗಾರು ಮತ್ತು ತೀವ್ರ ಮಳೆ ಕೊರತೆಯಿಂದಾಗಿ ವಿದ್ಯುತ್ ಬೇಡಿಕೆಯಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಸರಾಸರಿಗಿಂತ ಕಡಿಮೆ ಮಳೆಯಿಂದಾಗಿ, ರಾಜ್ಯದ ವಿವಿಧ ಜಲಾಶಯಗಳ ಸುತ್ತಲೂ ಸ್ಥಾಪಿಸಿರುವ ಜಲವಿದ್ಯುತ್ ಸ್ಥಾವರಗಳು ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. 'ಸೌರ ಮತ್ತು ಪವನ ಶಕ್ತಿ ಸ್ಥಾವರಗಳು ಸಹ ರಾಜ್ಯದ ಅಗತ್ಯತೆಗೆ ಬೇಕಿರುವ ಸಾಕಷ್ಟು ವಿದ್ಯುತ್ ಉತ್ಪಾದಿಸುತ್ತಿಲ್ಲ. ಹೀಗಾಗಿ, ಎನ್‌ಟಿಪಿಸಿಯಿಂದ ವಿದ್ಯುತ್ ಉತ್ಪಾದನೆಗೆ ಬೇಡಿಕೆ ಹೆಚ್ಚಿದೆ’ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ, ಚಳಿಗಾಲದಲ್ಲಿ ವಿದ್ಯುತ್ ಬೇಡಿಕೆಯು ಈ ಗರಿಷ್ಠ ಮಟ್ಟವನ್ನು ತಲುಪುವುದಿಲ್ಲ. ಬದಲಿಗೆ, ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗಿರುತ್ತದೆ. ಆದರೆ, ಈ ಬಾರಿ ಮುಂಗಾರು ವೈಫಲ್ಯದಿಂದಾಗಿ, ಉಷ್ಣ ಸ್ಥಾವರಗಳಿಂದ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ.

ಸ್ಥಾವರವು ಕರ್ನಾಟಕದಲ್ಲಿ ಸ್ಥಾಪನೆಯಾಗಿರುವುದರಿಂದ ಒಟ್ಟು ಉತ್ಪಾದನೆಯ ಶೇ 50ರಷ್ಟು ವಿದ್ಯುತ್ ಅನ್ನು ರಾಜ್ಯಕ್ಕೆ ಪೂರೈಸುವಂತೆ ಕರ್ನಾಟಕವು ಎನ್‌ಟಿಪಿಸಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸದ್ಯ ಒಟ್ಟು ಉತ್ಪಾದನೆಯ ಅರ್ಧದಷ್ಟನ್ನು ರಾಜ್ಯವೇ ಬಳಸಿಕೊಳ್ಳುತ್ತಿದೆ. ಕರ್ನಾಟಕವು ತನ್ನ ಶೇ 50ರಷ್ಟು ಪಾಲನ್ನು ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯುತ್ ಒದಗಿಸುವಂತೆ ಬೇಡಿಕೆ ಇಟ್ಟರೂ, ಹೆಚ್ಚುವರಿ ವಿದ್ಯುತ್ ಅನ್ನು ಬೇರೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಕರ್ನಾಟಕಕ್ಕೆ ಎನ್‌ಟಿಪಿಸಿ ಪೂರೈಸುವ ಶೇ 50ರಷ್ಟು ಸಂಪೂರ್ಣ ವಿದ್ಯುತ್ ಬೇಡವಾದರೆ, ಎನ್‌ಟಿಪಿಸಿ ಉಳಿದ ವಿದ್ಯುತ್ ಅನ್ನು ಅಗತ್ಯವಿರುವ ಇತರ ಗ್ರಾಹಕರಿಗೆ ಪೂರೈಸುತ್ತದೆ. ಆದಾಗ್ಯೂ, ಸದ್ಯಕ್ಕೆ ಕರ್ನಾಟಕವು ಹೆಚ್ಚಿನ ಪ್ರಮಾಣದ ವಿದ್ಯುತ್ ಅನ್ನು ಬಳಸುತ್ತಿದೆ ಎಂದು ಅಧಿಕಾರಿ ಹೇಳಿದರು. 

ವಿದ್ಯುತ್ ಬೇಡಿಕೆಯ ಮೇರೆಗೆ ಕೇಂದ್ರ ಗ್ರಿಡ್‌ನಿಂದ ಎನ್‌ಟಿಪಿಸಿಯು ನಿರ್ದೇಶನವನ್ನು ಪಡೆಯುತ್ತದೆ. ಅದರಂತೆ ಬೇಡಿಕೆಯ ಆಧಾರದ ಮೇಲೆ, ಎನ್‌ಟಿಪಿಸಿಯು ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಕೇಂದ್ರ ಗ್ರಿಡ್‌ಗೆ ಸರಬರಾಜು ಮಾಡುತ್ತದೆ. ಅದು ನಂತರ ಅಗತ್ಯವಿರುವ ರಾಜ್ಯಗಳಿಗೆ ನೀಡುತ್ತದೆ.

SCROLL FOR NEXT