ರಾಜ್ಯ

ಬೆಂಗಳೂರು: ಐಟಿ ದಾಳಿ ಬೆನ್ನಲ್ಲೇ ಉದ್ಯಮಿ ಮನೆ, ಕಚೇರಿ ಮೇಲೆ ಇ.ಡಿ ದಾಳಿ, ಪರಿಶೀಲನೆ

Ramyashree GN

ಬೆಂಗಳೂರು: ಕಳೆದೆರಡು ವಾರಗಳಿಂದ ನಗರದಲ್ಲಿ ದಾಳಿ ನಡೆಸಿದ ಐಟಿ ಅಧಿಕಾರಿಗಳು ಕೋಟ್ಯಂತರ ರೂಪಾಯಿ ನಗದನ್ನು ವಶಪಡಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ಉದ್ಯಮಿಯೊಬ್ಬರ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಮೂಲಗಳ ಪ್ರಕಾರ, ಮಂಗಳವಾರ ಉದ್ಯಮಿಯೊಬ್ಬರ ಮನೆ ಮತ್ತು ಕಚೇರಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ. ಉದ್ಯಮಿಯನ್ನು ಉಷಾ ರಾಮನಾನಿ ಎನ್ನಲಾಗಿದೆ.

ಕಸವನಹಳ್ಳಿ ಬಡಾವಣೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಲಾಗಿದ್ದು, ಉದ್ಯಮಿಯು ಎರಡು ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಆ ಕಂಪನಿಗಳಲ್ಲಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಡೈರೆಕ್ಟರ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಧಿಕಾರಿಗಳು ಎಂಟು ವಾಹನಗಳಲ್ಲಿ ಆಗಮಿಸಿ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ಸಂಬಂಧ ಹೆಚ್ಚಿನ ವಿವರಗಳು ಇನ್ನೂ ಲಭ್ಯವಾಗಬೇಕಿದೆ.

ಕಳೆದ ವಾರದಿಂದ ಬೆಂಗಳೂರಿನಲ್ಲಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ದಾಳಿ ನಡೆಸಿ 80 ಕೋಟಿ ರೂ. ಗೂ ಹೆಚ್ಚು ಹಣವನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರೊಬ್ಬರ ಫ್ಲ್ಯಾಟ್‌ನಲ್ಲಿ 40 ಕೋಟಿ ರೂ.ಗೂ ಹೆಚ್ಚು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಬಿಲ್ಡರ್‌ನ ಫ್ಲಾಟ್‌ನಲ್ಲಿ ಐಟಿ ಅಧಿಕಾರಿಗಳು 40 ಕೋಟಿ ರೂಪಾಯಿ ಹಣವನ್ನು ಪತ್ತೆ ಮಾಡಿದ್ದಾರೆ.

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಹಣ ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಸರ್ಕಾರದ ವಿರುದ್ಧ ನೇರ ಆರೋಪ ಮಾಡುತ್ತಿವೆ.

SCROLL FOR NEXT