ಬೆಂಗಳೂರು: ಬೀಗ ಹಾಕಿದ್ದ ಮನೆಗಳಲ್ಲಿ ಕಳ್ಳತನ ಮಾಡಲು ಕಳ್ಳರಿಗೆ ನೆರವು ನೀಡುತ್ತಿದ್ದ ಪೊಲೀಸ್ ಪೇದೆಯೊಬ್ಬನನ್ನು ಬಂಧನಕ್ಕೊಳಪಡಿಸಲಾಗಿದೆ.
ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಯಲ್ಲಪ್ಪ ಬಂಧಿತ ಆರೋಪಿ. ಕೆಲ ದಿನಗಳ ಹಿಂದಷ್ಟೇ ಕಳ್ಳನೊಬ್ಬನನ್ನು ಚಂದ್ರಾ ಲೇಔಟ್ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ವಿಚಾರಣೆ ವೇಳೆ ಪೊಲೀಸ್ ಪೇದೆ ಕೈವಾಡವಿರುವುದನ್ನು ಬಾಯ್ಬಿಟ್ಟಿದ್ದ.
ಪೊಲೀಸರಿಗೆ ಸಿಕ್ಕಿಬೀಳಬಾರದೆಂದು ತಾನು ಬಳಸುತ್ತಿದ್ದ ವಾಹನದ ನೋಂದಣಿ ಸಂಖ್ಯೆಯ ಪೈಕಿ ಎರಡು ಸಂಖ್ಯೆಗಳನ್ನು ಯಲ್ಲಪ್ಪ ಬದಲಾಯಿಸಿದ್ದ. ಜೊತೆಗೆ ವಿಚಾರಣೆ ವೇಳೆ ಹೈಡ್ರಾಮ ಮಾಡಿರುವ ಈತ ವಿಚಾರಣೆಗಾಗಿ ಸ್ವಂತ ಊರಿಗೆ ಕರೆದೊಯ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಲಂಚ ಕೇಳಿದರೆಂದು ದೂರು ನೀಡುತ್ತೇನೆಂದು ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ಕಳ್ಳತನ ಪ್ರಕರಣ: 15 ದಿನಗಳ ಜೈಲು ಶಿಕ್ಷೆ ಪ್ರಶ್ನಿಸಿ ಉನ್ನತ ನ್ಯಾಯಾಲಯದ ಮೆಟ್ಟಿಲೇರಿದ ಆರೋಪಿಗೆ 7 ವರ್ಷದ ಶಿಕ್ಷೆ!
ಅಂತಿಮವಾಗಿ ಶಿರಗುಪ್ಪಕ್ಕೆ ತೆರಳಿ ಪರಿಚಯಸ್ಥರ ಬಳಿ ಬಚ್ಚಿಟ್ಟಿದ್ದ 4.10 ಲಕ್ಷ ರೂ. ಮೌಲ್ಯದ 4 ಕೆ.ಜಿ ಬೆಳ್ಳಿ, 26 ಗ್ರಾಂ ಚಿನ್ನ ಹಾಗೂ 2 ವಾಚ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಈತ ಬನಶಂಕರಿ, ಚಿಕ್ಕಜಾಲ ಮತ್ತು ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಸ್ಥಾನದಲ್ಲಿರುವ ಯಲ್ಲಪ್ಪ ಕಳ್ಳತನ ಪ್ರಕರಣಗಳಲ್ಲಿ ನೇರವಾಗಿ ಭಾಗಿಯಾಗಿಲ್ಲ. ಆದರೆ, ಕಳ್ಳರಿಗೆ ನೆರವಾಗುತ್ತಿದ್ದ. ಲೂಟಿ ಮಾಡಿದ ಹಣವನ್ನು ಹಂಚಿಕೊಂಡ ಆರೋಪವೂ ಅವರ ಮೇಲಿದೆ' ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ