ಬೆಂಗಳೂರು: ರಾಜಧಾನಿಯಲ್ಲಿ ದೇಶದ ಅತ್ಯಂತ ಎತ್ತರದ ವೀಕ್ಷಣಾ ಗೋಪುರ ತಲೆ ಎತ್ತಲಿದೆ. ಸದ್ಯ ಇದು ಚಿಂತನೆಯ ಹಂತದಲ್ಲಿದೆ. ಶಾಂಘಾಯ್‌ನ ವೀಕ್ಷಣಾ ಗೋಪುರಗಳು ಇದಕ್ಕೆ ಮಾದರಿಯಾಗಿದೆ.
ನಗರದಲ್ಲಿ ವೀಕ್ಷಣಾ ಗೋಪುರ ನಿರ್ಮಾಣದ ಬಗ್ಗೆ ಬೆಂಗಳೂರು ನಗಾರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಗೋಪುರ ನಿರ್ಮಾಣಕ್ಕೆ ಜಾಗ ಗುರುತಿಸಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದು, ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಆಸ್ಟ್ರೀಯಾ ಮೂಲದ COOP HIMMELB(L)AU ಸಂಸ್ಥೆಯು ವರ್ಲ್ಡ್ ಡಿಸೈನ್ ಆರ್ಗನೈಸೇಶನ್ ಸಹಕಾರದೊಂದಿಗೆ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಕೈ ಡೆಸ್ಕ್ ಯೋಜನೆಯನ್ನು ಪರಿಶೀಲಿಸಿದೆ. ಇದು ನಿರ್ಮಾಣವಾದ ನಂತರ ದೇಶದಲ್ಲೇ ಅತಿ ಎತ್ತರದ ವೀಕ್ಷಣಾ ಗೋಪುರ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ ಎಂದು ಹೇಳಿದ್ದಾರೆ.
ಯೋಜನೆಯ ಅನುಷ್ಠಾನಕ್ಕೆ ಸೂಕ್ತವಾದ 8-10 ಎಕರೆ ಭೂಮಿಯನ್ನು ಗುರುತಿಸುವುದರ ಜೊತೆಗೆ ಆರ್ಥಿಕ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ಸರ್ಕಾರದ ‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆಯ ಭಾಗವಾಗಿರುವ ಅನೇಕ ವಾಸ್ತುಶಿಲ್ಪಿಗಳು ಮತ್ತು ತಜ್ಞರಿಗೆ ಈ ಯೋಜನೆಯ ಬಗ್ಗೆ ಮಾಹಿತಿ ಇಲ್ಸ, ಈ ಯೋಜನೆಯು ಪ್ರವಾಸಿಗರ ಆಕರ್ಷಣೆಯಾಗಿದೆ. ಕಾರ್ಯಸಾಧ್ಯತೆಯ ವರದಿ ಸಿದ್ಧವಾದಾಗ ಮಾತ್ರ, ಇತರ ಅಂಶಗಳ ಮೇಲೆ ಅದರ ಪರಿಣಾಮವು ತಿಳಿಯುತ್ತದೆ. ಈಗ ಯೋಜನೆಯ ಬಗ್ಗೆ ಪ್ರತಿಕ್ರಿಯಿಸಲು ಇದು ಸಕಾಲವಲ್ಲ ಎಂದು ಐಐಎಸ್‌ಸಿ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಆಶಿಶ್ ವರ್ಮಾ ಹೇಳಿದರು.
ಈ ಯೋಜನೆಯು ಆಕರ್ಷಕವಾಗಿದೆ. ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಾವು ಅಂತಹ ಯೋಜನೆ ನೋಡಿದ್ದೇವೆ. ಬೆಂಗಳೂರಿನಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣ ಇರುವುದರಿಂದ ಪೂರ್ವ ವಲಯದಲ್ಲಿ ಮಾಡಲು ಸಾಧ್ಯವಿಲ್ಲ. ಅದೇ ರೀತಿ, ಬೆಂಗಳೂರು ಮತ್ತು ಉತ್ತರ ಬೆಂಗಳೂರಿನ ಮಧ್ಯ ಭಾಗವು ಜಕ್ಕೂರ್ ಏರೋಡ್ರೋಮ್, ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಮತ್ತು ಕೆಂಪೇಗೌಡ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಕೆಐಎಎಲ್) ನಲ್ಲಿ ಮಾಡಲು ಸಾಧ್ಯವಿಲ್ಲ. ಯಾವುದೇ ಎತ್ತರದ ಕಟ್ಟಡವು (160 ಮೀಟರ್‌ಗಿಂತ ಹೆಚ್ಚು) ವಿಮಾನ ಕಾರ್ಯಾಚರಣೆಗೆ ಅನಾನುಕೂಲತೆ ಉಂಟುಮಾಡುತ್ತದೆ. ಹೀಗಾಗಿ ನಗರದ ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ಮಾತ್ರ ಅವಕಾಶವಿದೆ ಎಂದುಬೆಂಗಳೂರಿನ ಪ್ರಮುಖ ವಾಸ್ತುಶಿಲ್ಪಿಯೊಬ್ಬರು ತಿಳಿಸಿದ್ದಾರೆಯ
ಇಂತಹ ಬೃಹತ್ ಯೋಜನೆಗಳಿಗೆ ಮುಂದಾಗುವ ಮುನ್ನ ಬೆಂಗಳೂರಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ನಗರ ಮೂಲದ ನಗರ ವಿನ್ಯಾಸಕಾರರೊಬ್ಬರು ಹೇಳಿದ್ದಾರೆ.