ರಾಜ್ಯ

ಕೈಗಾರಿಕಾ ಪ್ರದೇಶಕ್ಕೆ ಲೋಡ್‌ ಶೆಡ್ಡಿಂಗ್‌ ಇಲ್ಲ: ಇಂಧನ ಇಲಾಖೆ ಸ್ಪಷ್ಟನೆ

Manjula VN

ಬೆಂಗಳೂರು: ಕೈಗಾರಿಕಾ ಪ್ರದೇಶಗಳಲ್ಲಿ ಲೋಡ್‌ ಶೆಡ್ಡಿಂಗ್‌ ಮಾಡುವುದಿಲ್ಲ. ನಿರಂತರ ವಿದ್ಯುತ್‌ ಪೂರೈಸಲಾಗುವುದು’ ಎಂದು ಇಂಧನ ಇಲಾಖೆ ಮಂಗಳವಾರ ಸ್ಪಷ್ಟಪಡಿಸಿದೆ.

ನಿನ್ನೆಯಷ್ಟೇ ಬೆಸ್ಕಾಂ ವಲಯದ ಕೈಗಾರಿಕಾ ಪ್ರತಿನಿಧಿಗಳ ಜತೆಗೆ ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ ಅವರು ವಿಡಿಯೋ ಸಂವಾದ ನಡೆಸಿದರು.

‘ರಾಜ್ಯ ವಿದ್ಯುತ್‌ ಅಭಾವ ಎದುರಿಸುತ್ತಿದ್ದರೂ ಬೆಸ್ಕಾಂ ವಲಯದ ಕೈಗಾರಿಕಾ ಪ್ರದೇಶಗಳಿಗೆ ನಿರಂತರ ವಿದ್ಯುತ್‌ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಪೀಣ್ಯ, ಬಿಡದಿ, ಹೊಸಕೋಟೆ, ಎಲೆಕ್ಟ್ರಾನಿಕ್ಸ್‌ ಸಿಟಿ, ಕುಂಬಳಗೋಡು, ಮಾಲೂರು, ನೆಲಮಂಗಲ, ದಾಬಸ್‌ಪೇಟೆ, ದಾವಣಗೆರೆ, ತುಮಕೂರು, ಕೋಲಾರ, ಗೌರಿಬಿದನೂರು, ವೈಟ್‌ಫೀಲ್ಡ್‌, ಹೇರೋಹಳ್ಳಿ ಸೇರಿದಂತೆ ವಿವಿಧೆಡೆಯ ಉದ್ಯಮ ಸಂಘಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬಿಳಗಿ ಸೇರಿದಂತೆ ಸರ್ಕಾರಿ ಅಧಿಕಾರಿಗಳಿಗೆ ಕೈಗಾರಿಕಾ ಸಂಸ್ಥೆಗಳು ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆಯ ಕೊರತೆಯಿಂದ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ತಿಳಿಸಿದವು.

ಸೋಮವಾರ, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್ ಸಂಘಗಳ ಸದಸ್ಯರು ಹೆಚ್ಚುತ್ತಿರುವ ವಿದ್ಯುತ್ ಕಡಿತದ ಬಗ್ಗೆ ಕಳವಳ ವ್ಯಕ್ತಪಡಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸಚಿವ ಕೆಜೆ ಜಾರ್ಜ್ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಈ ಪತ್ರವನ್ನು ರವಾನಿಸಲಾಗಿತ್ತು. ವಿದ್ಯುತ್ ಕಡಿತದಿಂದ ಕೋಲ್ಡ್ ಸ್ಟೋರೇಜ್‌ನಲ್ಲಿರುವ ವಸ್ತುಗಳು ಕೊಳೆಯಲು ಆರಂಭಿಸಿರುವುದರಿಂದ ಆರ್ಥಿಕ ನಷ್ಟ ಅನುಭವಿಸುತ್ತಿದ್ದೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

SCROLL FOR NEXT