ರಾಜ್ಯ

ಬೆಂಗಳೂರು ನಗರದಲ್ಲಿ ಪಟಾಕಿ ನಿಷೇಧಕ್ಕೆ ಚಿಂತನೆ: ಗೃಹ ಸಚಿವ ಡಾ ಜಿ ಪರಮೇಶ್ವರ್

Manjula VN

ಬೆಂಗಳೂರು: ದೀಪಾವಳಿ ಸಮೀಪಿಸುತ್ತಿದ್ದು, ಅನಾಹುತ ತಡೆಗಟ್ಟಲು ಪಟಾಕಿ ನಿಷೇಧಕ್ಕೆ ಸಾಧಕ ಬಾಧಕ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು.
    
ಬುಧವಾರ ಅತ್ತಿಬೆಲೆ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪಟಾಕಿ ನಿಷೇಧ ಪ್ರಾಯೋಗಿಕ ಜಾರಿಗೊಳಿಸಿ ಯಶಸ್ವಿಯಾದರೆ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಹೇಳಿದರು.

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಈಗಾಗಲೇ ಪಟಾಕಿ ನಿಷೇಧಿಸಲಾಗಿದೆ. ಇತ್ತೀಚಿಗೆ ರಾಜ್ಯ ಸರಕಾರ ಆದೇಶಿಸಿರುವಂತೆ ಯಾವುದೇ ಪಕ್ಷದ ಕಾರ್ಯಕ್ರಮಗಳಿಗೆ ಪಟಾಕಿ ನಿಷೇಧಿಸಲಾಗಿದೆ. ಇನ್ನೂ, ಹಬ್ಬಗಳ ಪಟಾಕಿ-ಸ್ಪೋಟಕ ಅಗ್ನಿ ದುರಂತಗಳಿಂದ ಅಮಾಯಕ ಜೀವಗಳು ಬಲಿಯಾಗುತ್ತಿವೆ ಇಂತಹ ದುರಂತಗಳು ಮತ್ತೆ ಮರುಕಳಿಸಬಾರದು ಎಂದು ತಿಳಿಸಿದರು.

ಅತ್ತಿಬೆಲೆ ಪಟಾಕಿ ದುರಂತಕ್ಕೆ ನಾಲ್ಕೂ ಇಲಾಖೆಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಹೀಗಾಗಿ ಇರುವ ಕಾಯಿದೆಗಳಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಿ ಅಗ್ನಿ ದುರಂತ ಹಾಗೂ ಪಟಾಕಿ ಅವಘಡಗಳಿಗೆ ಅಂತ್ಯ ಹಾಡುವಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, ಪಟಾಕಿ ದುರಂತ ರಾಜ್ಯಕ್ಕೊಂದು ಪಾಠ, ಇದರಿಂದ 17 ಮಂದಿ ಈ ವರೆಗೆ ಸಾವಿಗೀಡಾಗಿದ್ದಾರೆ. ಅವರಿಗೆ ದೇವರು ಸದ್ಗತಿ ಒದಗಿಸಲಿ ಎಂದು ಸಂತಾಪ ಸೂಚಿಸಿದರು.

ಪಟಾಕಿ ಮಾರಾಟದ ಜಾಗ ಹಾಗೂ ದಾಸ್ತಾನು ಮಳಿಗೆಗಳಿಗೆ ಪರವಾನಗಿ ಅವಧಿ ಅಕ್ಟೋಬರ್‍ಗೆ ಮುಗಿದಿದೆ. ಅನಂತರ ನವೀಕರಣಕ್ಕೆ ಅರ್ಜಿ ಸಲ್ಲಿಸಿದ ನವೀಕರಣದ ಪತ್ರವೇ ನಕಲಿಯಾಗಿತ್ತು. ಈ ಕುರಿತಂತೆ ಪರವಾನಗಿದಾರ ರಾಮಸ್ವಾಮಿ ರೆಡ್ಡಿ ವಿರುದ್ಧ ಕಠಿಣ ಕ್ರಮ ಅಗತ್ಯವಿದೆ ಎಂದು ಹೇಳಿದರು.

SCROLL FOR NEXT