ರಾಜ್ಯ

ರಾಜ್ಯ ಸರ್ಕಾರದಿಂದ ನೇಕಾರರಿಗೆ ದಸರಾ ಉಡುಗೊರೆ: ಮಗ್ಗಗಳಿಗೆ 250 ಯುನಿಟ್‌ವರೆಗೂ ಉಚಿತ ವಿದ್ಯುತ್‌

Lingaraj Badiger

ವಿಜಯಪುರ: ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನೇಕಾರರಿಗೆ ದಸರಾ ಉಡುಗೊರೆ ನೀಡಿದ್ದು, ಕೈಮಗ್ಗಗಳಿಗೆ 250 ಯುನಿಟ್‌ವರೆಗೂ ಉಚಿತ ವಿದ್ಯುತ್‌ ನೀಡುವಂತೆ ಆದೇಶ ಹೊರಡಿಸಿದೆ.

10 ಎಚ್​ಪಿವರೆಗಿನ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ತಿಂಗಳಿಗೆ ಗರಿಷ್ಠ 250 ಯೂನಿಟ್ ಉಚಿತ ವಿದ್ಯುತ್ ನೀಡಲು ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಜವಳಿ ಸಚಿವ ಶಿವಾನಂದ ‌ಪಾಟೀಲ್ ಅವರು ಶನಿವಾರ​ ಹೇಳಿದ್ದಾರೆ.

ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೇಕಾರರಿಗೆ ಇದರಿಂದ ದೊಡ್ಡ ಅನುಕೂಲವಾಗಲಿದೆ. ಚುನಾವಣೆಯಲ್ಲಿ ಘೋಷಿಸಿರುವುದನ್ನು ನಮ್ಮ ಸರ್ಕಾರ ಕಾರ್ಯರೂಪಕ್ಕೆ ತಂದಿದೆ ಎಂದರು.

ನೇಕಾರರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಲು ಸರ್ಕಾರ ಕ್ರಮಕೈಗೊಂಡಿದೆ. ಈ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ದಸರಾ, ದೀಪಾವಳಿ ಕೊಡುಗೆಯಾಗಿ ಉಚಿತ ವಿದ್ಯುತ್‌ ನೀಡಲು ಮುಂದಾಗಿದೆ ಎಂದರು.

ಈ ಯೋಜನೆ ಅನುಷ್ಠಾನದಿಂದ ರಾಜ್ಯದ ಸುಮಾರು 40 ಸಾವಿರ ನೇಕಾರರಿಗೆ ಅನುಕೂಲವಾಗಲಿದೆ. ನೇಕಾರರಿಗೆ ಉಚಿತ ವಿದ್ಯುತ್‌ ಪೂರೈಕೆಯಿಂದ ಮಾಸಿಕ ಅಂದಾಜು 150 ಕೋಟಿ ರೂ. ಅನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಭರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

10 ರಿಂದ 20 ಎಚ್‌.ಪಿ. ವರೆಗಿನ ವಿದ್ಯುತ್‌ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಪ್ರತಿ ಯುನಿಟ್‌ಗೆ 1.25 ರೂ. ಯಂತೆ ರಿಯಾಯಿತಿ ದರದಲ್ಲಿ ಮಾಸಿಕ ಗರಿಷ್ಠ 500 ಯುನಿಟ್‌ ವರೆಗೆ ವಿದ್ಯುತ್‌ ಪೂರೈಸಲಾಗುವುದು ಎಂದುಶಿವಾನಂದ ‌ಪಾಟೀಲ್ ಅವರು ಹೇಳಿದ್ದಾರೆ.

SCROLL FOR NEXT