ರಾಜ್ಯ

COTPA ಉಲ್ಲಂಘನೆ: ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಕೇಸ್ ದಾಖಲಿಸಿದ ಕರ್ನಾಟಕಕ್ಕೆ ಪ್ರಶಸ್ತಿ

Lingaraj Badiger

ಬೆಂಗಳೂರು: 2023ರ ತಂಬಾಕು ಮುಕ್ತ ಯುವ ಅಭಿಯಾನದ ಅಡಿಯಲ್ಲಿ ತಂಬಾಕು ನಿಯಂತ್ರಣ ಕಾನೂನುಗಳ ಅತ್ಯುತ್ತಮ ಮೇಲ್ವಿಚಾರಣೆಗಾಗಿ ಕರ್ನಾಟಕ ಆರೋಗ್ಯ ಇಲಾಖೆ ಪ್ರಶಸ್ತಿ ಪಡೆದುಕೊಂಡಿದೆ.

ರಾಜ್ಯ ಆರೋಗ್ಯ ಇಲಾಖೆ ಕಳೆದ 10 ವರ್ಷಗಳಲ್ಲಿ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ(COTPA) ಉಲ್ಲಂಘನೆಗಾಗಿ ದೇಶದಲ್ಲಿಯೇ ಅತಿ ಹೆಚ್ಚು ಅಂದರೆ 15.7 ಲಕ್ಷ ಪ್ರಕರಣಗಳನ್ನು ದಾಖಲಿಸಿದೆ. 

2019 ರಿಂದ COTPA ಪ್ರಕರಣಗಳನ್ನು ದಾಖಲಿಸುವ ವಿಚಾರದಲ್ಲಿ ಮತ್ತು ತಳಮಟ್ಟದಲ್ಲಿ ಜಾಗೃತಿ ಮೂಡಿಸುವಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದೆ ಎಂದು ರಾಷ್ಟ್ರೀಯ ತಂಬಾಕು ನಿಯಂತ್ರಣ ಕೋಶ(ಎನ್‌ಟಿಸಿಸಿ)ದ ರಾಜ್ಯ ನೋಡಲ್ ಅಧಿಕಾರಿ ಡಾ.ರಜನಿ ಪಿ ಅವರು ಹೇಳಿದ್ದಾರೆ.

ಈ ಸಂಬಂಧ ಎಲ್ಲಾ ಜಿಲ್ಲಾ ಮಟ್ಟದ ನಿಯಂತ್ರಣ ಕೇಂದ್ರಗಳು ಸಹ ಕ್ರಮ ತೆಗೆದುಕೊಳ್ಳುತ್ತಿವೆ. ರಾಜ್ಯದಲ್ಲಿ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳನ್ನು(ToFei) ರಚಿಸುವ ಬಗ್ಗೆ ಸಹ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ತಂಬಾಕು, ಡ್ರಗ್ಸ್ ಗಳ ಹೆಬ್ಬಾಗಿಲು ಎಂದು ಕರೆದ ಅವರು, ನಿಕೋಟಿನ್ ಅತ್ಯಂತ ವ್ಯಸನಕಾರಿ ವಸ್ತುವಾಗಿದ್ದು, ತಂಬಾಕು ಕೃಷಿ ಮತ್ತು ಸೇವನೆಯನ್ನು ಕಡಿಮೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೆ(GATS)ಯನ್ನು ಉಲ್ಲೇಖಿಸಿದ ಡಾ. ರಜನಿ, ಕರ್ನಾಟಕದಲ್ಲಿ 2009 ರಿಂದ 2016 ರವರೆಗೆ ತಂಬಾಕು ಸೇವನೆಯು ಶೇಕಡಾ 5.4 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.

ಡಾ. ರಜನಿ ಅವರು ಶುಕ್ರವಾರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಿಂದ ಪ್ರಶಸ್ತಿ ಸ್ವೀಕರಿಸಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ ರಂದೀಪ್ ಅವರು ಜಾಗೃತಿ ಮೂಡಿಸುವಲ್ಲಿ ಮತ್ತು ತಂಬಾಕು ಬಳಕೆ ಕಡಿಮೆ ಮಾಡುವಲ್ಲಿ ರಾಜ್ಯದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

SCROLL FOR NEXT