ರಾಜ್ಯ

ಮೈಸೂರು ಅರಮನೆಯಲ್ಲಿ ಇಂದು ಏನೇನು ಸಂಪ್ರದಾಯ, ಪೂಜೆಗಳು ನೆರವೇರಿದವು?

Sumana Upadhyaya

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysore Dasara-2023) ಮಹೋತ್ಸವ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು ಬೆಳಗ್ಗೆ ವಜ್ರ ಮುಷ್ಠಿ ಕಾಳಗ ನಡೆಯುತ್ತಿದ್ದಂತೆ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿಜಯ ಯಾತ್ರೆ ನಡೆಸಿ, ಬನ್ನಿ ಪೂಜೆಯನ್ನೂ ನೆರವೇರಿಸಿದರು. ಕಂಕಣವನ್ನು ವಿಸರ್ಜನೆ ಮಾಡುವ ಮೂಲಕ ಮೈಸೂರು ರಾಜಮನೆತನದ ವಿಜಯದಶಮಿ ಆಚರಣೆಗೆ ತೆರೆಬಿದ್ದಿದೆ.

ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಜತೆ ಯದುವೀರ್‌ ಅವರು ಮೆರವಣಿಗೆ ಹೊರಟರು. ಇದಕ್ಕಿಂತ ಮೊದಲು ಪಂಚಲೋಹದ ಪಲ್ಲಕ್ಕಿಗೆ ಪೂಜೆ ನೆರವೇರಿಸಿದರು. ಅಲ್ಲಿಂದ ಅರಮನೆ ಅಂಗಳದಲ್ಲಿರುವ ಭುವನೇಶ್ವರಿ ದೇವಸ್ಥಾನದಲ್ಲಿ ಪೂಜೆ‌ ಸಲ್ಲಿಸಿ, ದೇವಸ್ಥಾನದ ಒಳ ಆವರಣದಲ್ಲಿ ಇರುವ ಶಮಿ ವೃಕ್ಷಕ್ಕೆ ಪೂಜೆ‌ ಸಲ್ಲಿಸಿದರು.

ಭುವನೇಶ್ವರಿ ಮಂಟಪದಲ್ಲಿರುವ ಬನ್ನಿ ಮರಕ್ಕೆ ಶಾಸ್ತ್ರೋಕ್ತವಾಗಿ ಯದುವೀರ್‌ ಪೂಜೆ ಸಲ್ಲಿಸಿದರು. ಪಟ್ಟದ ಕತ್ತಿ ಹಿಡಿದು ವಿಜಯದಶಮಿ ಮೆರವಣಿಗೆ ಮಾಡಿದ ಅವರು ಬನ್ನಿಮರಕ್ಕೆ ಪದ್ಧತಿಯಂತೆ ಪೂಜೆಯನ್ನು ನೆರವೇರಿಸಿದರು.ಪೂಜೆ ಬಳಿಕ ಬಿಎಂಡಬ್ಲ್ಯು ಕಾರಿನಲ್ಲಿ ಅರಮನೆ ವಾಪಸ್ ಆದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕಂಕಣ ವಿಸರ್ಜನೆ‌ ಮಾಡಿದರು. ಆ ಮೂಲಕ ರಾಜ ಮನೆತನದ ವಿಜಯದಶಮಿ ಮುಕ್ತಾಯವಾಯಿತು. 

SCROLL FOR NEXT