ರಾಜ್ಯ

ಹಿಜಾಬ್ ಧರಿಸಲು ಅನುಮತಿ: ರಾಜ್ಯ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ

Lingaraj Badiger

ಬೆಂಗಳೂರು: ಅಕ್ಟೋಬರ್ 28 ಮತ್ತು 29 ರಂದು ನಡೆಯಲಿರುವ ನೇಮಕಾತಿ ಸಂಬಂಧಿತ ಪರೀಕ್ಷೆಗಳನ್ನು ಬರೆಯುವಾಗ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅನುಮತಿ ನೀಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ನಿರ್ಧಾರವನ್ನು ವಿರೋಧಿಸಿ ಕೆಲವು ಹಿಂದೂಪರ ಸಂಘಟನೆಗಳು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು.

"ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ನ್ಯಾಯಾಲಯದ ಕಟ್ಟುನಿಟ್ಟಿನ ಮಾರ್ಗಸೂಚಿಗಳ ಹೊರತಾಗಿಯೂ ರಾಜ್ಯ ಸರ್ಕಾರ ಅನಗತ್ಯವಾಗಿ ಹಿಜಾಬ್ ವಿಷಯವನ್ನು ಮತ್ತೆ ಮುನ್ನೆಲೆಗೆ ತಂದಿದೆ" ಎಂದು ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕ ಸಂತೋಷ್ ಕೆಂಚಾಂಬ ಅವರು ಆರೋಪಿಸಿದ್ದಾರೆ. 

ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಕೆಂಚಾಂಬ, ಅಲ್ಪಸಂಖ್ಯಾತ ಸಮುದಾಯದ ಮತ ಸೆಳೆಯಲು ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಈ ವಿಷಯವನ್ನು ಮತ್ತೊಮ್ಮೆ ಹೈಲೈಟ್ ಮಾಡುತ್ತಿದೆ ಎಂದು ದೂರಿದ್ದಾರೆ.

ಕೋಮುವಾದದ ಆಧಾರದ ಮೇಲೆ ಸಮಾಜ ವಿಭಜನೆಗೆ ಕಾರಣವಾಗುವ ನಿರ್ಧಾರಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಸಂತೋಷ್ ಕೆಂಚಾಂಬ ಅವರು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಹಿಜಾಬ್ ಧರಿಸಲು ಅವಕಾಶ ನೀಡುವ ತೀರ್ಮಾನ ತೆಗೆದುಕೊಂಡಿದ್ದರು.

SCROLL FOR NEXT