ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಮೇಲೆ ಎಚ್‌ಡಿ ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ಇಂಧನ ಸಚಿವ ಕೆಜೆ ಜಾರ್ಜ್ ತಳ್ಳಿಹಾಕಿದ್ದಾರೆ. ರಾಜ್ಯದ ಇಂಧನ ಅಗತ್ಯಗಳನ್ನು ಪೂರೈಸಲು ವಿದ್ಯುತ್ ಖರೀದಿ ಮತ್ತು ಕಲ್ಲಿದ್ದಲು ಆಮದು ಮಾಡಿಕೊಳ್ಳುವಲ್ಲಿ ಅವ್ಯವಹಾರ ನಡೆದಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು.
ಕಲ್ಲಿದ್ದಲು ಆಮದು ಮತ್ತು ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರ ಮತ್ತು ಅವ್ಯವಹಾರ ನಡೆದಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಆರೋಪಗಳು ಆಧಾರರಹಿತವಾಗಿದ್ದು, ಈ ಹೇಳಿಕೆಯನ್ನು ನಾವು ತಿರಸ್ಕರಿಸುತ್ತೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
'ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ವಿದ್ಯುತ್ ಬಳಕೆ ಕಡಿಮೆಯಾಗಿದೆ. ಆದರೆ, ಈ ವರ್ಷ, ಬೇಡಿಕೆಯಲ್ಲಿ ತೀವ್ರ ಹೆಚ್ಚಳ ಕಂಡುಬಂದಿದೆ. ವಿದ್ಯುತ್ ಬೇಡಿಕೆಯು ತುಂಬಾ ಹೆಚ್ಚಿದ್ದು, ಆಗಸ್ಟ್‌ನಲ್ಲಿನ ವಿದ್ಯುತ್ ಬಳಕೆ ಬೇಸಿಗೆಯ ತಿಂಗಳ ಬಳಕೆಯನ್ನು ಮೀರಿಸಿದೆ' ಎಂದು ಹೇಳಿದರು.
ರಾಜ್ಯದ ಸ್ಥಾಪಿತ ಸಾಮರ್ಥ್ಯಕ್ಕಿಂತ ಕಡಿಮೆ ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ಸರ್ಕಾರ ಕೃತಕ ವಿದ್ಯುತ್ ಅಭಾವವನ್ನು ಸೃಷ್ಟಿಸುತ್ತಿದೆ. ವಿದ್ಯುತ್ ಖರೀದಿಗೆ ಕಮಿಷನ್ ಪಡೆಯಲಾಗುತ್ತಿದೆ. ರಾಜ್ಯವು 32,912 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಸದ್ಯ ಅಸಮರ್ಪಕ ನಿರ್ವಹಣೆಯಿಂದ ಸುಮಾರು 12,000 ಮೆಗಾವ್ಯಾಟ್ ವಿದ್ಯುತ್ ಅನ್ನು ಮಾತ್ರ ಉತ್ಪಾದಿಸಲಾತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದಿಂದ ಕೃತಕ ವಿದ್ಯುತ್ ಅಭಾವ ಸೃಷ್ಟಿ; ಜಾರ್ಜ್ಗೆ ಹೈಕಮಾಂಡ್ ಏನಾದರೂ 'ಫಿಕ್ಸ್' ಮಾಡಿದೆಯೇ?: ಎಚ್ ಡಿಕೆ
ಇದಕ್ಕೆ ಪ್ರತಿಕ್ರಿಯಿಸಿದ ಕೆಜೆ ಜಾರ್ಜ್, ರಾಜ್ಯವು ಒಟ್ಟು 32,009 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದು ರಾಜ್ಯದೊಳಗೆ ಉತ್ಪಾದಿಸಬಹುದಾದ ಗರಿಷ್ಠ ಪ್ರಮಾಣದ ವಿದ್ಯುತ್ ಆಗಿದೆ. ಈ ಸ್ಥಾಪಿತ ಸಾಮರ್ಥ್ಯದಲ್ಲಿ, 26,000 ಮೆಗಾವ್ಯಾಟ್ ವಿದ್ಯುತ್ ರಾಜ್ಯದ ಯುಟಿಲಿಟಿ ಕಂಪನಿಗಳಿಗೆ ಬಳಸಲು ಲಭ್ಯವಿದೆ. ಆದರೆ, ಉಳಿದ 6,000 ಮೆಗಾವ್ಯಾಟ್ ಅನ್ನು ಖಾಸಗಿ ಬಳಕೆಗೆ ಮೀಸಲಿಡಲಾಗಿದೆ. ರಾಜ್ಯದ ಯುಟಿಲಿಟಿ ಕಂಪನಿಗಳಲ್ಲಿ ಲಭ್ಯವಿರುವ 26,000 ಮೆಗಾವ್ಯಾಟ್‌ನಲ್ಲಿ ಶೇ 50ರಷ್ಟನ್ನು ಈಗಾಗಲೇ ಬಳಸಲಾಗುತ್ತಿದೆ. ರಾಜ್ಯದಲ್ಲಿ ದಿನನಿತ್ಯ ಅಂದಾಜು 11,000 ರಿಂದ 12,000 ಮೆಗಾವ್ಯಾಟ್ ಸಂಗ್ರಹಿಸುವ ಸಾಮರ್ಥ್ಯವಿದೆ. ರಾಜ್ಯವು ಸೌರ ವಿದ್ಯುತ್ ಮೂಲಗಳಿಂದ ವಿದ್ಯುತ್ ಉತ್ಪಾದಿಸುತ್ತದೆ. ಸೌರ ವಿದ್ಯುತ್ ಉತ್ಪಾದನೆ (ಬಿಸಿಲು ಜಾಸ್ತಿಯಿರುವ) ಅತ್ಯಧಿಕವಾಗಿರುವ ಸಮಯದಲ್ಲಿ ಸುಮಾರು 15,000 ರಿಂದ 16,000 ಮೆಗಾವ್ಯಾಟ್ ವರೆಗೆ ವಿದ್ಯುತ್ ಉತ್ಪಾದನೆಯಾಗುತ್ತದೆ ಎಂದರು.
ಹೀಗಾಗಿ ಕೃತಕ ವಿದ್ಯುತ್ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿಗಳ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಸವಾಲುಗಳ ನಡುವೆಯೂ ರಾಜ್ಯದ ಜನತೆಗೆ ಹಾಗೂ ನಿರಂತರ ವಿದ್ಯುತ್ ಸೇವೆ ಒದಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದ ಜನರನ್ನು ದಾರಿ ತಪ್ಪಿಸುವ ಸಲುವಾಗಿಯೇ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದಾರೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
'ಹೀಗಾಗಿ, ವಿದ್ಯುತ್ ಖರೀದಿಯಲ್ಲಿ ಭ್ರಷ್ಟಾಚಾರ ಅಥವಾ ಸರ್ಕಾರದ ಯಾವುದೇ ಅವ್ಯವಹಾರದ ಪ್ರಶ್ನೆಯೇ ಇಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಅವರಿಗೆ ಹೇಳಬಯಸುತ್ತೇನೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ವಿದ್ಯುತ್ ಖರೀದಿ ಬಗ್ಗೆ ಚೆನ್ನಾಗಿಯೇ ತಿಳಿದಿರುತ್ತಾರೆ ಮತ್ತು ಅವರ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ ಮತ್ತು ಸತ್ಯಕ್ಕೆ ದೂರವಾಗಿದ್ದು, ರಾಜ್ಯದ ಜನರನ್ನು ದಾರಿ ತಪ್ಪಿಸುವ ಹುಚ್ಚು ಕಲ್ಪನೆಗಳು ಮಾತ್ರ ಇವೆ' ಎಂದು ಅವರು ಹೇಳಿದರು.
ಕಲ್ಲಿದ್ದಲು ಆಮದು ಮಾಡಿಕೊಳ್ಳುವಲ್ಲಿ ಭ್ರಷ್ಟಾಚಾರದ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, ರಾಷ್ಟ್ರದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಇಂಧನ ಮತ್ತು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು, ನಾವು ಶೇ 10-20 ರಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುತ್ತೇವೆ ಮತ್ತು ಭಾರತೀಯ ಕಲ್ಲಿದ್ದಲಿನೊಂದಿಗೆ ಮಿಶ್ರಣ ಮಾಡುತ್ತೇವೆ. ಇದು ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ನಡೆಸುತ್ತಿರುವ ದೇಶದ ಎಲ್ಲಾ ಉಷ್ಣ ಸ್ಥಾವರಗಳ ಸಾರ್ವತ್ರಿಕ ಅಭ್ಯಾಸವಾಗಿದೆ ಎಂದು ತಿಳಿಸಿದರು.