ಸಂಗ್ರಹ ಚಿತ್ರ 
ರಾಜ್ಯ

‘ಕರ್ನಾಟಕ’ಕ್ಕೆ 50 ರ ಸಂಭ್ರಮ: ವರ್ಷಪೂರ್ತಿ ಸಂಭ್ರಮಿಸಲು ರಾಜ್ಯ ಸರ್ಕಾರ ಸಿದ್ಧತೆ!

ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಈ ವಿಶೇಷ ಸಂದರ್ಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ವರ್ಷ ಪೂರ್ತಿ ವೈವಿಧ್ಯಮಯ ನಾಡಹಬ್ಬ ಆಚರಣೆಗೆ ತೀರ್ಮಾನ ಮಾಡಲಾಗಿದೆ.

ಬೆಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ಪೂರ್ಣಗೊಂಡ ಈ ವಿಶೇಷ ಸಂದರ್ಭದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯದಂತೆ ವರ್ಷ ಪೂರ್ತಿ ವೈವಿಧ್ಯಮಯ ನಾಡಹಬ್ಬ ಆಚರಣೆಗೆ ತೀರ್ಮಾನ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ‌ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ‌ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರ್ಷದ ನವೆಂಬರ್ 1ರಿಂದ‌ ಮುಂದಿನ‌ ವರ್ಷ 2024ರ ನವೆಂಬರ್ 30ರ ವರೆಗೆ ಕರ್ನಾಟಕದ‌ ಇತಿಹಾಸ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ನಾಡು-ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ಹೇಳಿದರು.

ನವೆಂಬರ್ 1ರಂದು ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ಧ್ವಜಾರೋಹಣ ನೆರವೇರಿಕೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಶಾಸಕರು ಕನ್ನಡ ಧ್ವಜ ವಂದನೆ ನೆರವೇರಿಸಲಿದ್ದಾರೆ. ರಾಜ್ಯದ ಶಾಲಾ ಕಾಲೇಜುಗಳಲ್ಲಿ ಸಂಭ್ರಮ ಸಡಗರದಿಂದ ನಾಡಧ್ವಜದ ಧ್ವಜಾರೋಹಣ ಕಾರ್ಯಕ್ರಮ ನಡೆಸುವುದು. ನಾಡಿನ ಎಲ್ಲ ಕನ್ನಡಿಗರು, ಕನ್ನಡ ಮನಸ್ಸುಗಳು, ಕನ್ನಡ ಪರ ಹೋರಾಟಗಾರರು ಈ ಸಂಭ್ರಮದಲ್ಲಿ ತೊಡಗುವಂತಾಗಬೇಕು ಎಂದು ತಿಳಿಸಿದರು.

ನವೆಂಬರ್ 1ರಂದು ರಾಜ್ಯದ ಎಲ್ಲ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಕರ್ನಾಟಕ ಸಂಭ್ರಮ-50 : ಉಸಿರಾಯಿತು ಕರ್ನಾಟಕ ಹೆಸರಾಗಲಿ ಕನ್ನಡ ಎನ್ನುವ ಘೋಷ ವಾಕ್ಯವನ್ನು ನಮ್ಮ ತಾಯಂದಿರು ಹಾಗೂ ಸಹೋದರಿಯರು ಬರೆಯಬೇಕು.

ನವೆಂಬರ್ 1ರ ಬೆಳಗ್ಗೆ 9 ಗಂಟೆಗೆ ಎಲ್ಲಾ ರೆಡಿಯೋಗಳಲ್ಲಿ ನಾಡಗೀತೆ ಮೊಳಗಲಿದೆ. ರಾಷ್ಟ್ರಗೀತೆಗೆ ಗೌರವ ಸಮರ್ಪಿಸುವ ಹಾಗೆ ಎಲ್ಲರೂ ಎದ್ದು ನಿಂತು ನಾಡಗೀತೆಗೆ ಗೌರವ ಸಮರ್ಪಣೆ ಮಾಡಬೇಕು. ನವೆಂಬರ್ 1ರ ಸಂಜೆ 5 ಗಂಟೆಗೆ ನಿಮ್ಮ- ನಿಮ್ಮ ಊರುಗಳ ಮೈದಾನಗಳಲ್ಲಿ ಕೆಂಪು- ಹಳದಿ ಬಣ್ಣದ ಗಾಳಿಪಟಗಳನ್ನು ಬಾನೆತ್ತರಕ್ಕೆ ಹಾರಿಸಿ. ಈ ಗಾಳಿಪಟ ಉತ್ಸವದ ಮೂಲಕ ನಮ್ಮ ಸುವರ್ಣ ಸಂಭ್ರಮವನ್ನು ಜಗತ್ತಿಗೆ ಸಾರಿ ಹೇಳಲಾಗುವುದು. ನವೆಂಬರ್ 1ರ ರಾತ್ರಿ ಏಳು ಗಂಟೆಗೆ ಪ್ರತಿಯೊಬ್ಬರ ಮನೆ, ಕಚೇರಿ, ಅಂಗಡಿ ಮಳಿಗೆಗಳ ಮುಂದೆ ಹಣತೆಯಲ್ಲಿ ಕನ್ನಡ ಜ್ಯೋತಿ ಬೆಳಗಿಸಲಾಗುವುದು.

ಸಂಭ್ರಮದ‌ ಪ್ರಯುಕ್ತ ಭವ್ಯ ಕರ್ನಾಟಕ ರಥಯಾತ್ರೆಯನ್ನು ಇಡೀ ವರ್ಷ ಪೂರ್ತಿ ನಾಡಿನ‌ ಉದ್ದಗಲ ಸಂಚರಿಸುವಂತೆ ಯೋಜನೆ ರೂಪಿಸಲಾಗಿದೆ. ಕರ್ನಾಟಕ ಏಕೀಕಕರಣದ ವಿಷಯ, ಸಾಹಿತ್ಯ, ಸಾಧನೆಗಳ ಪಥ, ಐತಿಹಾಸಿಕ ನೆಲೆಗಳ ಮಾಹಿತಿ, ಕನ್ನಡ ಜ್ಯೋತಿ, ಭುವನೇಶ್ವರಿ ಪ್ರತಿಮೆ ಸಹಿತ ಕರ್ನಾಟಕದ ಎಲ್ಲಾ 31 ಜಿಲ್ಲೆಗಳ ಪರಿಚಯ ಮಾಡಿಕೊಡುವ ವಿಶೇಷ ಕರ್ನಾಟಕ ಪಾರಂಪರಿಕ ರಥಯಾತ್ರೆ ಎಲ್ಲಾ 31 ಜಿಲ್ಲೆಗಳ ಸಹಿತ ಎಲ್ಲಾ ತಾಲ್ಲೂಕು ಕೇಂದ್ರ, ಹೋಬಳಿ ಕೇಂದ್ರ ಹಾಗೂ ಮತ್ತು ಎಲ್ಲ ಗ್ರಾಮಗಳಲ್ಲೂ ಪರ್ಯಾಟನೆ ನಡೆಸಲಿದೆ.

ಇದಕ್ಕೆ‌‌ ಸಂಬಂಧಿಸಿದ ರೂಟ್ ಮ್ಯಾಪ್ ಕೂಡ ಸಿದ್ಧಪಡಿಸಿದ್ದು, ಅದರಂತೆ ರಥಯಾತ್ರೆ ಹಾಗೂ ಜ್ಯೋತಿ ಸಾಗಲಿದೆ. ಅಲ್ಲದೆ, ರಾಜ್ಯಾದ್ಯಂತ ಎಲ್ಲಾ‌ ಶಾಲಾ- ಕಾಲೇಜುಗಳಲ್ಲಿ ನನ್ನ ಭಾಷೆ, ನನ್ನ ಹಾಡು ಪ್ರಬಂಧ ಸ್ಪರ್ಧೆ, ರಸ ಪ್ರಶ್ನೆ‌ ಮತ್ತು ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವುದು. ರಾಜ್ಯದ ಪ್ರತಿ ಶಾಲೆಗಳು, ವಲಯಮಟ್ಟ, ತಾಲ್ಲೂಕು ಮಟ್ಟ, ಜಿಲ್ಲಾ‌ ಮಟ್ಟ, ನಾಲ್ಕು ಕಂದಾಯ ವಿಭಾಗಗಳು ಮತ್ತು ರಾಜ್ಯ ಮಟ್ಟದಲ್ಲಿ‌ ಸ್ಪರ್ಧೆಗಳು ನಡೆಯಲಿವೆ. ಕನ್ನಡ ಭಾಷೆ, ಕರ್ನಾಟಕ ರಾಜ್ಯದ ಕುರಿತು ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು ಎಂಬುದು ‌ಇದರ ಹಿಂದಿನ‌ ಆಶಯ ಎಂದು ಹೇಳಿದರು.

1973ರಲ್ಲಿ‌‌‌ ಅಂದಿನ‌‌ ಮುಖ್ಯಮಂತ್ರಿ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟ ಬಳಿಕ ನವೆಂಬರ್ 2ರಂದು ಹಂಪಿಯಲ್ಲಿ ಹಾಗೂ ನವೆಂಬರ್ 3 ರಂದು ಗದಗ ಜಿಲ್ಲೆಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದೇ ಮಾದರಿಯಲ್ಲಿ ಎರಡು ಜಿಲ್ಲೆಗಳಲ್ಲಿ ಕಾರ್ಯಕ್ರಮ‌ ನಡೆಯಲಿದೆ.‌ ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅರ್ಥ ಪೂರ್ಣವಾಗಿ ಕಾರ್ಯಕ್ರಮ ಆಗುವ ಬಗ್ಗೆ ತಮ್ಮ‌ ಜಿಲ್ಲೆಗಳಲ್ಲಿ ‌ರಥಯಾತ್ರೆ ಹಾಗೂ ಜ್ಯೋತಿ ಬಂದಾಗ ಮಾಡಬೇಕಾದ ಕೆಲಸಗಳ ಬಗ್ಗೆ ಸೂಚನೆ ನೀಡಲಾಗಿದೆ.

ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳು ಕೂಡ ಕರ್ನಾಟಕದ ಸಂಭ್ರಮದ ಭಾಗವಾಗಲಿದ್ದು, ಅವರೊಂದಿಗು ಚರ್ಚೆ ನಡೆಸಲಾಗಿದೆ. ಅರವ ಕಚೇರಿಗಳಲ್ಲಿ ಕನ್ನಡದ ಕಂಪು ಕುರಿತು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದರು.

ನವೆಂಬರ್ 1ರಂದು ರಾಜ್ಯೋತ್ಸವ ‌ಕಾರ್ಯಕ್ರಮದಲ್ಲಿ ನಾಡಿನ‌ ಹೆಸರಾಂತ ಕವಿಗಳ 05 ಕನ್ನಡ ಗೀತೆಗಳನ್ನು ಹಾಡುವ ಮೂಲಕ ಸಮಸ್ತ ಕನ್ನಡಿಗರು‌ ಕನ್ನಡಾಂಬೆಗೆ ನುಡಿ ನಮನ(ಗೀತೆ ಗಾಯನ) ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT