ರಾಜ್ಯ

ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸಿ: ರಾಜ್ಯ ಸರ್ಕಾರಕ್ಕೆ ಕೇಂದ್ರ ಸಚಿವ ಭಗವಂತ ಖೂಬಾ

Manjula VN

ಬೀದರ್: ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡುವ ಮೂಲಕ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕರಿಸಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಒತ್ತಾಯಿಸಿದರು.

ಭಾನುವಾರ ಬೀದರ್ ರೈಲು ನಿಲ್ದಾಣದಲ್ಲಿ ಬೀದರ್‌–ಯಶವಂತಪುರ ಹೊಸ ರೈಲು ಸಂಚಾರಕ್ಕೆ ಭಗವಂತ್ ಖೂಬಾ ಅವರು, ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿದ ಅವರು, ಬೀದರ್ ನಾಂದೇಡ್ ಹೊಸ ರೈಲು ಮಾರ್ಗಕ್ಕೆ ರೈಲ್ವೇ ಇಲಾಖೆ ಹಣ ನೀಡಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಅನುದಾನ ಮೀಸಲಿಟ್ಟಿದ್ದು, ಬೊಮ್ಮಾಯಿ ಸರ್ಕಾರ ಘೋಷಣೆ ಮಾಡಿ ಬಜೆಟ್ ನಲ್ಲಿ ಅನುದಾನಕ್ಕೆ ಮಂಜೂರಾತಿ ಮಾಡಿತಾದರೂ, ಕಾಂಗ್ರೆಸ್'ನ ಈಗಿನ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಅದು ಸಿಕ್ಕ ಬಳಿಕರೂ.2,500 ಕೋಟಿಗಳ ಈ ಯೋಜನೆಯ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಜಿಲ್ಲಾ ಸಚಿವ ಈಶ್ವರ ಖಂಡ್ರೆ ಅವರ ಸಹಕಾರವನ್ನು ಕೋರಿದರು.

ದಕ್ಷಿಣ ಭಾರತದಲ್ಲಿ ಸೌರಶಕ್ತಿಯ ಅತಿದೊಡ್ಡ ಶಕ್ತಿ ಕೇಂದ್ರವಾಗಿರುವ ಔರಾದ್ ತಾಲೂಕಿನಲ್ಲಿ 2000 ಮೆಗಾವ್ಯಾಟ್ ವಿದ್ಯುತ್ ಕೇಂದ್ರಕ್ಕೆ 8,000 ಎಕರೆ ಭೂಮಿಯನ್ನು ಒದಗಿಸಿ, 1,600 ಜನರಿಗೆ ಉದ್ಯೋಗ ನೀಡುವಂತೆ ಹಾಗೂ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ನವೆಂಬರ್ ಅಂತ್ಯದೊಳಗೆ 450 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನೂತನ ಅನುಭವ ಮಂಟಪಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು 650 ಕೋಟಿ ರೂ.ಗಳನ್ನು ನೀಡಿದ್ದರು. ಈ ಪೈಕಿ ರೂ. 200 ಕೋಟಿಗಳನ್ನು ಬಿಡುಗಡೆ ಮಾಡಿದ್ದರು. ಇದೀಗ ನಿರ್ಮಾಣಕ್ಕೆ ಹೆಚ್ಚಿನ ಹಣದ ಅಗತ್ಯವಿದೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ರಾಜಕೀಯ ಮಾಡಬಾರದು ಎಂದರು.

ಇದೇ ವೇಳೆ ಬೀದರ್-ಹುಬ್ಬಳ್ಳಿ ಮತ್ತು ಬೀದರ್-ಬೆಳಗಾವಿ, ಮತ್ತು ಬೀದರ್-ಪರ್ಭಾಣಿ ನಡುವೆ ವಂದೇ ಭಾರತ್ ರೈಲು ತರಲು ಪ್ರಯತ್ನ ನಡೆಸುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂಎಲ್‌ಸಿಗಳಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಬೀದರ್ ಸಿಎಂಸಿ ಅಧ್ಯಕ್ಷ ಮಹಮ್ಮದ್ ಗೌಸ್, ಬಿಜೆಪಿ ಮುಖಂಡರಾದ ಶಿವರಾಜ್ ಗಂದಗೆ, ಬಾಬು ವಾಲಿ, ಸಿಕಂದರಾಬಾದ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಭರತೇಶ್ ಕುಮಾರ್ ಜೈನ್ ಇತರರು ಉಪಸ್ಥಿತರಿದ್ದರು.

SCROLL FOR NEXT