ರಾಜ್ಯ

ಬೆಂಗಳೂರು: ಟೆರೇಸ್ ಮೇಲೆ ಪಬ್ ನಡೆಸುತ್ತಿರುವವರ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಮುಂದು!

Manjula VN

ಬೆಂಗಳೂರು: ಕೋರಮಂಗಲದ ಹುಕ್ಕಾ ಬಾರ್ ಮಡ್​​ಪೈಪ್ ಕೆಫೆಯಲ್ಲಿ ಅಗ್ನಿ ದುರಂತ ಸಂಭವಿಸಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ನಗರದ ಪಬ್​, ಬಾರ್​​ ಮತ್ತು ರೆಸ್ಟೋರೆಂಟ್​ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪರಿಶೀಲನೆ ವೇಳೆ ನಿಯಮಗಳ ಉಲ್ಲಂಘಿಸಿ ಟೆರೇಸ್ ಗಳ ಮೇಲೆ ಪಬ್ ಗಳನ್ನು ನಡೆಸುತ್ತಿರುವ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ.

ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಎ.ಎಸ್.ಬಾಲಸುಂದರ್ ಮಾತನಾಡಿ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯಡಿ ಯಾವುದೇ ರೆಸ್ಟೋರೆಂಟ್ ಅಥವಾ ಪಬ್ ಟೆರೇಸ್‌ಗಳಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಲು ಅವಕಾಶವಿಲ್ಲ. ಆದರೆ, ಕೆಲವು ನಿಯಮ ಉಲ್ಲಂಘಿಸಿ ಮಹಡಿಯ ಮೇಲೆ ಪಬ್ ಗಳನ್ನು ನಡೆಸುತ್ತಿದ್ದಾರೆ. ಇದು ವ್ಯಾಪಾರ ಪರವಾನಗಿಯ ಉಲ್ಲಂಘನೆಯಾಗಿದೆ. ಇಂತಹ ಪಬ್ ಗಳನ್ನು ಬಂದ್ ಮಾಡಿಸಲಾಗುತ್ತಿದೆ. ಪರಿಶೀಲನೆಯ ಪ್ರಕ್ರಿಯೆಯು ಇನ್ನೂ ಮುಂದುವರೆದಿದ್ದು, ಕ್ರೋಢೀಕೃತ ವರದಿಯನ್ನು ಸಿದ್ಧಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪಾಲಿಕೆಯ ಈ ನಿಯಮ ಇದೀಗ ಟೆರೇಸ್ ಮೇಲೆ ಪಬ್ ನಡೆಸುತ್ತಿರುವವರ ತಲೆ ಬಿಸಿಯಾಗುವಂತೆ ಮಾಡಿದೆ.

ಇದನ್ನೂ ಓದಿ: ಮಡ್‌ಪೈಪ್ ಕೆಫೆ ಅಗ್ನಿ ಅವಘಡ ಪ್ರಕರಣ: ನಗರದಲ್ಲಿ ಮುಂದುವರೆದ ಬಿಬಿಎಂಪಿ ತಪಾಸಣೆ, 48 ರೆಸ್ಟೋರೆಂಟ್'ಗಳು ಬಂದ್
 
ನಗರದ ರೆಸ್ಟೋರೆಂಟ್ ಮಾಲೀಕರೊಬ್ಬರು ಮಾತನಾಡಿ, “ಮಡ್‌ಪೈಪ್ ಕೆಫೆ ಅಗ್ನಿ ದುರಂತ ಘಟನೆ ಬಳಿಕ ಅಗ್ನಿಶಾಮಕ ಇಲಾಖೆ ಮತ್ತು ಬಿಬಿಎಂಪಿ ಸಿಬ್ಬಂದಿ ರೆಸ್ಟೋರೆಂಟ್ ಪರಿಶೀಲನೆಗೆ ಬಂದಿದ್ದರು. ನಾವು ಎಲ್ಲಾ ರೀತಿಯ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ. ಟೆರೇಸ್ ಮೇಲೆ ಕೆಲವು ಕುರ್ಚಿ ಹಾಗೂ ಟೇಬಲ್ ಗಳನ್ನು ಇರಿಸಲಾಗಿದೆ. ಆದರೆ, ಅಧಿಕಾರಿಗಳು ಟೆರೇಸ್ ಬಳಸದಂತೆ ಸೂಚಿಸಿದ್ದಾರೆ. ಆದರೆ, ನೆಲಮಹಡಿಯಲ್ಲಿರುವ ರೆಸ್ಟೋರೆಂಟ್ ನಲ್ಲಿ ಅಷ್ಟೊಂದು ಸ್ಥಳಾವಕಾಶದ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಮಡ್ ಪೈಪ್ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ, ತನ್ನ ವ್ಯಾಪ್ತಿಯಲ್ಲಿರುವ ಪಬ್‌ಗಳು, ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಅಗ್ನಿಶಾಮಕ ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ಅರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ. ನಡೆಯುತ್ತಿರುವ ಪರಿಶೀಲನೆ ಕುರಿತು ಮೇಲ್ವಿಚಾರಣೆಯನ್ನೂ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ನಿಯಮ ಉಲ್ಲಂಘಿಸುತ್ತಿರುವವರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ. ಕೆಲವು ಪಬ್, ರೆಸ್ಟೋರೆಂಟ್ ಗಳನ್ನು ಬಂದ್ ಮಾಡಿಸಲಾಗಿದೆ. ಅಡುಗೆಮನೆಯು ಸ್ವಚ್ಛವಾಗಿರಬೇಕು ಮತ್ತು ವಸ್ತುಗಳನ್ನು ನಿರ್ವಹಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು. ಅನೇಕ ಸಂಸ್ಥೆಗಳು ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಅವುಗಳಿಗೆ ನೋಟಿಸ್‌ಗಳನ್ನು ನೀಡಿ, ಕೆಲವನ್ನು ಬಂದ್ ಮಾಡಲಿಸಲಾಗಿದೆ. ಅಕ್ಟೋಬರ್ 28 ರವರೆಗಿನ ಕಾರ್ಯಾಚರಣೆಯಲ್ಲಿ 49 ಅಂಗಡಿಗಳು ಮತ್ತು ಸಂಸ್ಥೆಗಳನ್ನು ಮುಚ್ಚಲಾಗಿದೆ ಎಂದು ಬಾಲಸುಂದರ್ ಅವರು ಮಾಹಿತಿ ನೀಡಿದರು.

SCROLL FOR NEXT