ರಾಜ್ಯ

ಮಡಿಕೇರಿ: ಅಕ್ರಮವಾಗಿ ನಕಲಿ ಮದ್ಯ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

Lingaraj Badiger

ಮಡಿಕೇರಿ: ಕೊಡಗಿನಲ್ಲಿ ಅಕ್ರಮವಾಗಿ ನಕಲಿ ಮದ್ಯ ತಯಾರಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮಡಿಕೇರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ತಾವೂರು ಗ್ರಾಮದ ನಿವಾಸಿ ಹಾಸೀಂ(47) ಎಂದು ಗುರುತಿಸಲಾಗಿದ್ದು, ಆರೋಪಿಯು ಅಕ್ರಮವಾಗಿ ಮದ್ಯವನ್ನು ತಯಾರಿಸಿ ಅದನ್ನು ಭಾರತದಲ್ಲಿ ತಯಾರಿಸಿದ ವಿದೇಶಿ ಮದ್ಯದ ಲೇಬಲ್‌ಗಳ ಅಡಿಯಲ್ಲಿ ಮಾರಾಟ ಮಾಡುತ್ತಿದ್ದ. ಕೊಡಗು ಮತ್ತು ಕೇರಳ ಭಾಗಗಳಲ್ಲಿ ಈ ನಕಲಿ ಮದ್ಯ ಮಾರಾಟ ಮಾಡುತ್ತಿದ್ದ ಶಂಕೆ ವ್ಯಕ್ತವಾಗಿದೆ.

ಖಚಿತ ಮಾಹಿತಿ ಮೇರೆಗೆ ಭಾಗಮಂಡಲ ಪೊಲೀಸರು ಭಾಗಮಂಡಲ ವ್ಯಾಪ್ತಿಯ ತಾವೂರು ಗ್ರಾಮದ ಹಾಸೀಂ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಮದ್ಯ ತಯಾರಿಸಲು ಬಳಸುವ ೬೦ ಕೆ.ಜಿ ೩೦೦ ಗ್ರಾಂ ತೂಕದ ಕಾಸ್ಟಿಕ್ ಕಾರ್ಮೆಲ್ ಮತ್ತು ೨ ಸಾವಿರ ಖಾಲಿ ಬಾಟಲ್, ಲೆಬಲ್, ಮುಚ್ಚಳ ವಶಪಡಿಸಿಕೊಳ್ಳಲಾಗಿದೆ.

ಕಾಸರಗೋಡು ಮೂಲದ ಹಾಸೀಂ ಇತ್ತೀಚೆಗೆ ಈ ಗ್ರಾಮದ ಮಹಿಳೆಯನ್ನು ಮದುವೆಯಾಗಿ ಇಲ್ಲಿಯೇ ವಾಸಿಸುತ್ತಿದ್ದ. ಹಾಸೀಂ ಮಾನವ ಜೀವಕ್ಕೆ ಹಾನಿಯಾಗುವಂತಹ ಹಾಗೂ ಅಮಲೇರಿಸುವ ಪದಾರ್ಥವನ್ನು ಬಳಸಿ ಮದ್ಯ ತಯಾರಿಸುತ್ತಿದ್ದ ಎನ್ನಲಾಗಿದೆ.

ಎಸ್ಪಿ ರಾಮರಾಜನ್ ಕೆ, ಡಿವೈಎಸ್ಪಿ ಜಗದೀಶ್, ಮಡಿಕೇರಿ ಸಿಪಿಐ ಅನೂಪ್ ಮಾದಪ್ಪ ಅವರ ಮಾರ್ಗದರ್ಶನದಲ್ಲಿ ಭಾಗಮಂಡಲ ಎಸ್‌ಐ ಶೋಬಾ ಎಲ್ ಮತ್ತಿತರರ ನೇತೃತ್ವದಲ್ಲಿ ದಾಳಿ ನಡೆದಿದೆ.

SCROLL FOR NEXT