ರಾಜ್ಯ

ಬೆಂಗಳೂರಿನ ಪಬ್‌ನಲ್ಲಿ ಓಣಂ ಆಚರಿಸುತ್ತಿದ್ದ ಕೇರಳದ ಯುವಕರ ಮೇಲೆ ಹಲ್ಲೆ

Shilpa D

ಬೆಂಗಳೂರು: ನೆಕ್ಸಸ್ ಕೋರಮಂಗಲ ಪಬ್ ನಲ್ಲಿ ಓಣಂ ಆಚರಿಸುತ್ತಿದ್ದ ಕೇರಳದ ಐದು ಯುವಕರ ಮೇಲೆ ಗುಂಪೊಂದು ದಾಳಿ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಕೇರಳ ಯುವಕರು ಪಬ್ ನಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಪಕ್ಕದ ಟೇಬಲ್ ನಲ್ಲಿ ಕುಳಿತಿದ್ದ ಆರೋಪಿಗಳು ತೊಂದರೆ ಕೊಡಲು ಆರಂಭಿಸಿದ್ದಾರೆ. ಅವರಲ್ಲಿ ಒಬ್ಬ ಪದೇ ಪದೇ ಡ್ಯಾನ್ಸ್ ಮಾಡುತ್ತಿದ್ದವರನ್ನು ತಳ್ಳುತ್ತಿದ್ದ, ಇದರಿಂದ ಕೋಪಗೊಂಡ ಕೇರಳ ಯುವಕರ ತಂಡದಲ್ಲಿದ್ದ ಒಬ್ಬ ಆರೋಪಿಗಳಲ್ಲಿ ಒಬ್ಬನನ್ನು ನೆಲಕ್ಕೆ ತಳ್ಳಿದ್ದಾನೆ.

ಹೊರಗೆ ಹೋದ ಆರೋಪಿ ಬಟ್ಟೆ ಬದಲಿಸಿ ವಾಪಸ್ ಬಂದಿದ್ದಾನೆ. ನಂತರ ಅವರು ಸಂತ್ರಸ್ತರ ಮೇಲೆ ಗಾಜಿನ  ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಇಬ್ಬರು ಸಂತ್ರಸ್ತರ ಮುಖ ಗಾಯಗೊಂಡು ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ ಒಬ್ಬರು ಡಿಸ್ಚಾರ್ಜ್ ಆಗಿದ್ದರೆ, ಇನ್ನೊಬ್ಬ ಯುವಕನ ಮುಖ ವಿರೂಪಗೊಂಡಿದ್ದು ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ಸಂಬಂಧ ದೂರು ದಾಖಲಾಗಿದ್ದು, ಆರೋಪಿ ವಿರುದ್ಧ ಕೇಸ್ ದಾಖಲಿಸಲಾಗಿದೆ. 27 ವರ್ಷದ ದೂರುದಾರರು ಬಹು ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಉಪ ವ್ಯವಸ್ಥಾಪಕರಾಗಿದ್ದಾರೆ. ಸಂತ್ರಸ್ತರಲ್ಲಿ ಒಬ್ಬರು ಅವರ ಸಹೋದ್ಯೋಗಿಯಾಗಿದ್ದು, ಇನ್ನೊಬ್ಬರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.

ತನ್ನ ಸಹೋದ್ಯೋಗಿಯನ್ನು ಬುಧವಾರ ಡಿಸ್ಚಾರ್ಜ್ ಮಾಡಲಾಗಿದ್ದು, ಐಸಿಯುನಲ್ಲಿರುವ ಇನ್ನೊಬ್ಬ ಸ್ನೇಹಿತನನ್ನು ಭಾನುವಾರ ಡಿಸ್ಚಾರ್ಜ್ ಮಾಡಲಾಗುವುದು ಎಂದು ದೂರುದಾರರು ತಿಳಿಸಿದ್ದಾರೆ. ನಾವು ಮತ್ತು ಆರೋಪಿಗಳೆಲ್ಲರೂ ಕೇರಳದವರು. ಯಾವುದೇ ಪ್ರಚೋದನೆ ಇಲ್ಲದೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ಲಾಸ್ಟಿಕ್ ಸರ್ಜರಿಯ ಅಗತ್ಯವಿರುವ ನನ್ನ ಸ್ನೇಹಿತ ಕನ್ನಡಕ ಧರಿಸದಿದ್ದರೆ ದೃಷ್ಟಿ ಕಳೆದುಕೊಳ್ಳುತ್ತಿದ್ದ. ಅವರ ಹುಬ್ಬುಗಳಿಗೆ ಗಾಯವಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿಯ ನಿವಾಸಿ ದೂರುದಾರರು ಹೇಳಿದ್ದಾರೆ. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

SCROLL FOR NEXT