ಬೆಂಗಳೂರು: ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕದ ಗ್ರಾಮೀಣ ಪ್ರದೇಶಗಳಿಂದ ಅನ್ನ ಹುಡುಕಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ಅನೇಕರು ಸಾಧನೆ ಮಾಡಿದ್ದಾರೆ. ಇನ್ನೂ ಅನೇಕರು ಸಾಧನೆಯ ಹಾದಿಯಲ್ಲಿದ್ದಾರೆ. ಅಂಥವರ ಬೆನ್ನಿಗೆ ನಿಂತು ಪ್ರೋತ್ಸಾಹಿಸುವ ಕೆಲಸ ಕವಿಪವಿ ಸಂಘಟನೆ ಮಾಡುತ್ತಿದೆ ಎಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಸಂಪಾದಕ ವಸಂತ ನಾಡಿಗೇರ್ ಹೇಳಿದರು.
ಪ್ರೆಸ್‌ಕ್ಲಬ್‌ನಲ್ಲಿ ರವಿವಾರ ಕರ್ನಾಟಕ ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸಂಘ(ಕವಿಪವಿ) ಹಮ್ಮಿಕೊಂಡಿದ್ದ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಗಳು ವಿಘಟನೆಯಾಗುತ್ತಿರುವ ಇಂದಿನ ದಿನಗಳಲ್ಲಿ ಕವಿಪವಿ ಉತ್ತಮ ಕೆಲಸ ಮಾಡುತ್ತಿದೆ. ಸುದ್ದಿಮನೆಯಲ್ಲಿ ಕೆಲಸ ಹುಡುಕಿಕೊಂಡು ಬರುವ ಅನೇಕರಿಗೆ ಮಾರ್ಗದರ್ಶನ ಮಾಡುತ್ತಿರುವ ಕವಿಪವಿ ಸದಸ್ಯರು ಇನ್ನೂ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಮಾದರಿಯಾಗುವ ಅನಿವಾರ್ಯತೆ ಇಂದು ಇದೆ ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಮಾನಸಿಕ ಸ್ಥೈರ್ಯ, ಧೈರ್ಯ ತುಂಬುವ ಕೆಲಸವನ್ನು ಕವಿಪವಿ ಮಾಡುತ್ತಿದೆ. ಇದು ಇನ್ನೂ ಮುಂದುವರೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಂಘಟನೆ ಆರಂಭಕ್ಕೆ ಕಾರಣಿಕರ್ತರಲ್ಲೊಬ್ಬರಾದ ನಿವೃತ್ತ ಉಪನ್ಯಾಸಕ ಡಾ. ಹಾಲಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಹಾಲಸ್ವಾಮಿ ಅವರು, ಕವಿಪವಿ ಬೆಳೆದುಬಂದ ಬಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕವಿಪವಿ ಅಧ್ಯಕ್ಷ ಚಂದ್ರಕಾಂತ ಸೊನ್ನದ, ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ ಶಿರಯಣ್ಣವರ್ ಪ್ರಾಸ್ತಾವಿಕ ಮಾತನಾಡಿದರು.
ಸುಶೀಲಾ ಡೋಣೂರ ಸ್ವಾಗತಿಸಿ ಪರಿಚಯಿಸಿದರು. ಪ್ರವೀಣ ಶಿರಿಯಣ್ಣವರ ವಂದಿಸಿದರು. ರಶ್ಮಿ ಎಸ್ ಕಾರ್ಯಕ್ರಮ ನಿರೂಪಿಸಿದರು. ಕವಿಪವಿ ಉಪಾಧ್ಯಕ್ಷ ಲಿಂಗರಾಜ್ ಬಡಿಗೇರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.