ರಾಜ್ಯ

ಮೆಕಾಲೆ ಶಿಕ್ಷಣ ವ್ಯವಸ್ಥೆ ಉದಾರೀಕರಣಗೊಳಿಸದಿದ್ದರೆ ಸನಾತನವಾದಿಗಳ ಮನೆಯಲ್ಲಿ ಗುಲಾಮನಾಗಿರುತ್ತಿದ್ದೆ ಎಂದಿದ್ದರು ಕುವೆಂಪು: ಮಹಾದೇವಪ್ಪ

Shilpa D

ಬೆಂಗಳೂರು: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ದೇಶಾದ್ಯಂತ ರಾಜಕೀಯ ಕೋಲಾಹಲ ಸೃಷ್ಟಿಸಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ  ಸನಾತನವಾದವು ಶೂದ್ರರನ್ನು ಶತಮಾನಗಳಿಂದ ಶಿಕ್ಷಣದಿಂದ ದೂರವಿಟ್ಟಿದೆ ಎಂದು  ಹೇಳಿದ್ದಾರೆ.

ಮಂಗಳವಾರ  ಶಾಲಾ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಮಹದೇವಪ್ಪ, ಸ್ವಾತಂತ್ರ್ಯದ ಸಂದರ್ಭದಲ್ಲಿ ಕೇವಲ ಶೇ.10 ರಷ್ಟು ಭಾರತೀಯರು ಮಾತ್ರ ಸಾಕ್ಷರರಾಗಿದ್ದರು.

ಬೆಳಕಿನ ಹಾದಿಯನ್ನು ಹುಡುಕುವ ಶಿಕ್ಷಣವಿಲ್ಲದ ಕಾರಣ ಬಹುಪಾಲು ಭಾರತೀಯರು ಕತ್ತಲೆಯಲ್ಲಿ ಬದುಕುತ್ತಿದ್ದರು. ದೇಶದಲ್ಲಿ ಬಹುಸಂಖ್ಯಾತರಾದ ಶೂದ್ರರಿಗೆ ಶಿಕ್ಷಣವನ್ನು ನಿರಾಕರಿಸಲಾಯಿತು. ಶಿಕ್ಷಣ ಪಡೆಯಲು ಯತ್ನಿಸಿದವರನ್ನು ಶಿಕ್ಷಿಸುತ್ತಿದ್ದರು ಎಂದು ಹೇಳಿದ್ದಾರೆ.

ಬ್ರಿಟಿಷರು ದೇಶಕ್ಕೆ ದೊಡ್ಡ ಹಾನಿಯುಂಟು ಮಾಡಿದ್ದರೂ, ಲಾರ್ಡ್ ಮೆಕಾಲೆ ಅವರ ಶಿಕ್ಷಣ ವ್ಯವಸ್ಥೆಯ ಉದಾರೀಕರಣವು ಶೂದ್ರರಿಗೆ ಶಿಕ್ಷಣ ಪಡೆಯಲು ಸಹಾಯ ಮಾಡಿತು ಎಂದು ಅವರು ಹೇಳಿದರು. ಈ ಶಿಕ್ಷಣ ಉದಾರೀಕರಣದಿಂದ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಉನ್ನತ ಶಿಕ್ಷಣ ಪಡೆಯುವ ಅವಕಾಶ ದೊರೆಯಿತು ಎಂದರು.

ನಾವು ಈಗ ಡಾ ಬಿಆರ್ ಅಂಬೇಡ್ಕರ್ ಅವರ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಆಚರಿಸುತ್ತೇವೆ. ಬ್ರಿಟಿಷರು ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಉದಾರೀಕರಣಗೊಳಿಸದಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.  ಮೆಕಾಲೆ ಶಿಕ್ಷಣ ವ್ಯವಸ್ಥೆಯನ್ನು ಉದಾರೀಕರಣಗೊಳಿಸದೇ ಹೋಗಿದ್ದರೆ ನಾನು ಸನಾತನವಾದಿಗಳ ಮನೆಯಲ್ಲಿ ಗುಲಾಮನಾಗಿ ಬದುಕುತ್ತಿದ್ದೆ ಎಂದು ಸಾಹಿತಿ ಕುವೆಂಪು ಅವರು ಹೇಳಿದ್ದರು ಎಂದು ಮಹಾದೇವಪ್ಪ ತಿಳಿಸಿದರು. ವಿವಿಧ ನೀತಿಗಳ ಮೂಲಕ ಸಾಕ್ಷರತೆ ಪ್ರಮಾಣ ಶೇ.75ಕ್ಕೆ ಏರಿಕೆಯಾಗಿದೆ. "ಮೊದಲಿನಿಂದಲೂ ಉಚಿತ ಶಿಕ್ಷಣ ನೀತಿ ಇದ್ದಿದ್ದರೆ, ನಾವು ಶಿಕ್ಷಣದಲ್ಲಿ ಯುರೋಪಿಯನ್ ರಾಷ್ಟ್ರಗಳನ್ನು ಸಹ ಹಿಂದಿಕ್ಕಬಹುದಿತ್ತುಎಂದು ಅವರು ಹೇಳಿದರು.

ಸಮಾಜ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಶಿಕ್ಷಣದಿಂದ ನಾವು ಎಲ್ಲವನ್ನೂ ಸಾಧಿಸಬಹುದು. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ದೂರದೃಷ್ಟಿ ಹೊಂದಿದ್ದ ನೆಹರೂ ಅವರು ಮೊದಲು ಇಸ್ರೋವನ್ನು ಪ್ರಾರಂಭಿಸಿದರು. ಈಗ ವಿಜ್ಞಾನಿಗಳು ಚಂದ್ರನತ್ತ ಉಪಗ್ರಹಗಳನ್ನು ಕಳುಹಿಸಿ ಚಿತ್ರಗಳನ್ನು ಕಳುಹಿಸುತ್ತಿರುವುದು ದೊಡ್ಡ ಸಾಧನೆಯಾಗಿದೆ. ಆದರೆ, ಸುಧಾರಿತ ತಂತ್ರಜ್ಞಾನದಿಂದ ಮಾನವೀಯ ಮೌಲ್ಯಗಳು ಹಾಳಾಗುತ್ತಿವೆ ಎಂದು ಅವರು ಹೇಳಿದರು.

SCROLL FOR NEXT