ರಾಜ್ಯ

ನೈಋತ್ಯ ಮಾನ್ಸೂನ್ ಮತ್ತೆ ಸಕ್ರಿಯ; ಈ ವಾರ ರಾಜ್ಯದಾದ್ಯಂತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಮುನ್ಸೂಚನೆ

Manjula VN

ಬೆಂಗಳೂರು: ರಾಜ್ಯದಲ್ಲಿ ನೈಋತ್ಯ ಮಾನ್ಸೂನ್ (ಮುಂಗಾರು) ಮತ್ತೆ ಚುರುಕು ಗೊಳ್ಳುತ್ತಿದ್ದು, ಈ ವಾರ ರಾಜ್ಯದಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮಂಗಳವಾರ ರಾತ್ರಿ 8.30 ರವರೆಗೆ ನಗರದಲ್ಲಿ 18 ಮಿಮೀ ಮಳೆಯಾಗಿದ್ದು, ಈ ಪೈಕಿ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 15 ಮಿಮೀ ಮಳೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಸೆಪ್ಟೆಂಬರ್ 8 ರವರೆಗೆ ಮಳೆಯಾಗಲಿದೆ. ಮುಂದಿನ 48 ಗಂಟೆಗಳ ಕಾಲ, ಉತ್ತರ ಒಳನಾಡು, ಕರಾವಳಿ ಭಾಗ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವಿಜ್ಞಾನಿ ಎ ಪ್ರಸಾದ್ ಅವರು ಹೇಳಿದ್ದಾರೆ.

IMD ನೀಡಿರುವ ಪ್ರಕಾರ, ಮಂಗಳವಾರ ರಾತ್ರಿ 8.30 ರವರೆಗೆ, ಸೇಡಂ (ಕಲಬುರಗಿ) 8 ಸೆಂಮೀ, ಬೀದರ್ 6 ಸೆಂಮೀ, ಕೋಟ (ಉಡುಪಿ) ಮತ್ತು ಚಿಂಚೋಳಿ (ಕಲಬುರಗಿ) ನಲ್ಲಿ ತಲಾ 5 ಸೆಂ.ಮೀ ಮಳೆ ದಾಖಲಾಗಿದೆ ಎಂದು ತಿಳಿದುಬಂದಿದೆ.

ಮುಂದಿನ 24 ಗಂಟೆಗಳ ಕಾಲ ರಾಜ್ಯ ಕೆಲವು ಭಾಗಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಬೀದರ್, ಕಲಬುರಗಿ, ಕೊಪ್ಪಳ ಮತ್ತು ರಾಯಚೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಮಳೆಗೆ ಧರೆಗುರುಳಿದ ಮರಗಳು
ಈ ನಡುವೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಸುರಿದ ಭಾರೀ ಮಳೆಗೆ ನಾಲ್ಕು ಮರಗಳು ಧರೆಗುರುಳಿವೆ.

ಜೆಪಿ ನಗರ, ರಾಜರಾಜೇಶ್ವರಿ ನಗರ, ಎಚ್‌ಎಎಲ್ 2 ಹಂತಗಳಲ್ಲಿ ಮೂರು ಮರಗಳು ಉರುಳಿದ್ದರೆ, ಕೆಸಿ ಜನರಲ್ ಆಸ್ಪತ್ರೆ ಬಳಿ ಮತ್ತೊಂದು ಮರ ಧರೆಗುರುಳಿದೆ. ಪರಿಣಾಮ ದ್ವಿಚಕ್ರ ವಾಹನ ಹಾಗೂ ಕಾರಿಗೆ ಹಾನಿಯಾಗಿದೆ. ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದ ಕಾರು ಚಾಲಕ ಹಾಗೂ ಬೈಕ್ ಸವಾರ ಅದೃಷ್ಟವಶಾತ್ ಪಾರಾಗಿದ್ದಾರೆ. ಮಳೆಯ ಪರಿಣಾಮ ಥಣಿಸಂದ್ರದ ಎರಡು ರಸ್ತೆಗಳು ಸೇರಿದಂತೆ ನಗರದ ಹಲವು ರಸ್ತೆಗಳು ಜಲಾವೃತಗೊಂಡಿದ್ದವು.

SCROLL FOR NEXT