ರಾಜ್ಯ

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಪತ್ರ ಬರೆದಿದ್ದ ಒಂಬತ್ತನೇ ತರಗತಿ ಬಾಲಕಿ!

Ramyashree GN

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಮಳಲಿ ಗ್ರಾಮದ ಶ್ರೀ ಜಗದ್ಗುರು ಫಕ್ಕೀರೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಆಶಾ ಪಾಟೀಲ ಅವರು ಶನಿವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಸ್ತಲಾಘವ ಮಾಡಿದ್ದು ವಿಶೇಷವಾಗಿತ್ತು.

ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ನೀಡುವ ಕಾರ್ಯಕ್ರಮವನ್ನು ಒಂಬತ್ತು ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದಕ್ಕಾಗಿ ವಿದ್ಯಾರ್ಥಿನಿ ಆಶಾ ಅವರು ಇತ್ತೀಚೆಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ( ಮೊಟ್ಟೆ ) ನೀಡುವುದೂ ಸೇರಿದಂತೆ ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಶ್ಲಾಘಿಸಿ ಪತ್ರ ಬರೆದಿದ್ದ ಧಾರವಾಡ ಜಿಲ್ಲೆ ಕುಂದಗೋಳದ ಆಶಾ ನೆಹರು ಪಾಟೀಲ್ ಎಂಬ ವಿದ್ಯಾರ್ಥಿನಿಯನ್ನು ಇಂದು ಭೇಟಿಮಾಡಿದೆ. ಕೃಷಿ ಮೇಳ ಉದ್ಘಾಟನೆಗೆ ಧಾರವಾಡಕ್ಕೆ ತೆರಳಿದ್ದ ವೇಳೆಯಲ್ಲಿ ವಿದ್ಯಾರ್ಥಿನಿಯನ್ನು ಭೇಟಿಯಾಗಿ ಮಾತನಾಡಿದ್ದು ನನಗೆ ಖುಷಿ ಕೊಟ್ಟಿದೆ ಎಂದಿದ್ದಾರೆ. 

ಸಿದ್ದರಾಮಯ್ಯನವರನ್ನು ನೇರವಾಗಿ ಭೇಟಿಯಾಗಬೇಕೆಂಬ ಆಸೆಯಿಂದ ಆಶಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅವರು ಧಾರವಾಡಕ್ಕೆ ಹೊರಡುವಾಗ ವಿದ್ಯಾರ್ಥಿನಿ ನಗುಮುಖದಿಂದ  ಸಿದ್ದರಾಮಯ್ಯನವರ ಕೈಕುಲುಕಿದರು.

'ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡುವುದು ಅದೇ ಶಾಲೆಯಲ್ಲಿ ಒಂಬತ್ತು ಮತ್ತು 10ನೇ ತರಗತಿ ಓದುತ್ತಿರುವವರಲ್ಲಿ ತಾರತಮ್ಯ ಭಾವನೆ ಮೂಡಿಸುತ್ತಿದ್ದು, ಈ ಸೌಲಭ್ಯವನ್ನು ಆ ವಿದ್ಯಾರ್ಥಿಗಳಿಗೂ ನೀಡುವಂತೆ ಪತ್ರ ಬರೆದಿದ್ದೆ. ಸರ್ಕಾರ ಒಪ್ಪಿಕೊಂಡಿದ್ದು, ಒಳ್ಳೆಯ ನಡೆ' ಎಂದು ಆಶಾ ನೆಹರು ಪಾಟೀಲ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ನಮ್ಮ ಸರ್ಕಾರವು ಗ್ಯಾರಂಟಿ ಯೋಜನೆಗಳು, ವಿದ್ಯಾರ್ಥಿ ಸ್ನೇಹಿ ಕಾರ್ಯಕ್ರಮಗಳ ಮೂಲಕ ನಾಡಿನ ಜನತೆಗೆ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸ್ವಾವಲಂಬಿ ಬದುಕಿನ ಕನಸಿಗೆ ಬೆಂಬಲವಾಗಿ ನಿಂತಿದೆ. ನಮ್ಮ ಈ ಯೋಜನೆಗಳ ಫಲಾನುಭವಿಯಾದ ಪುಟ್ಟ ಹುಡುಗಿಯೊಬ್ಬಳು ನನ್ನೊಂದಿಗೆ ಪತ್ರದ ಮೂಲಕ ಸಂತಸ ಹಂಚಿಕೊಂಡು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದಳು. ಆ ಪತ್ರ ಓದಿದಾಗಿಂದ ಆ ಮಗುವನ್ನು ಒಮ್ಮೆ ಭೇಟಿಯಾಗಬೇಕೆಂದು ಬಯಸಿದ್ದೆ, ಅದು ಇಂದು ಸಾಧ್ಯವಾಯಿತು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿದ್ಯಾರ್ಥಿನಿಯೊಂದಿಗಿನ ಫೋಟೊ ಹಂಚಿಕೊಂಡಿರುವ ಅವರು, ಇಂತಹ ಮುಗ್ಧ ಮಕ್ಕಳ ಭವಿಷ್ಯದ ಕನಸುಗಳು ನಮ್ಮ ಸರ್ಕಾರದ ಕೈಗಳಲ್ಲಿ ಸುರಕ್ಷಿತವಾಗಿದೆ. ಈ ಮಕ್ಕಳ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯವೆಂದು ಭಾವಿಸಿ, ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೇವೆ ಎಂದಿದ್ದಾರೆ.

SCROLL FOR NEXT