ರಾಜ್ಯ

ಚಿನ್ನ ಕಳ್ಳಸಾಗಣೆ: 3.3 ಕೋಟಿ ರೂಪಾಯಿ ಮೌಲ್ಯದ 5.2 ಕೆಜಿ ಚಿನ್ನ ವಶಪಡಿಸಿಕೊಂಡ ಡಿಆರ್‌ಐ

Manjula VN

ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದ ಜಾಲವೊಂದಲ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಮೂವರು ಮಹಿಳೆಯರನ್ನು ಬಂಧನಕ್ಕೊಳಪಡಿಸಿ, ಮಹಿಳೆಯರಿಂದ 3.3 ಕೋಟಿ ಮೌಲ್ಯದ 5.2 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ.

ಬಂಧಿತ ಮೂವರು ಮಹಿಳೆಯರು ಚೆನ್ನೈ ಮೂಲದವರಾಗಿದ್ದು, ದುಬೈನಲ್ಲಿ ಕೈತುಂಬ ವೇತನ ನೀಡುವ ಉದ್ಯೋಗ ನೀಡುವುದಾಗಿ ಆಮಿಷವೊಡ್ಡಿ, ಮೂವರಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಇದರಂತೆ ಆಮಿಷಕ್ಕೊಳಗಾಗಿದ್ದ ಮಹಿಳೆಯರು ಚಿನ್ನದ ಕಳ್ಳಸಾಗಣೆ ಮಾಡುತ್ತಿದ್ದರು. ಟರ್ಮಿನಲ್ 2 ರಲ್ಲಿ ಎಮಿರೇಟ್ಸ್ ವಿಮಾನದಲ್ಲಿ (EK 566) ಮಹಿಳೆಯರು ಆಗಮಿಸಿತ್ತು. ಈ ವೇಳೆ ಮೂವರನ್ನೂ ಬಂಧನಕ್ಕೊಳಪಡಿಸಲಾಗಿದೆ.

ವಿಮಾನವು ಸಂಜೆ 7:30 ಕ್ಕೆ ಬೆಂಗಳೂರಿಗೆ ಬಂದಿಳಿದಿತ್ತು. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಮಹಿಳೆಯರನ್ನು ಪರಿಶೀಲನೆ ನಡೆಸಲಾಗಿತ್ತು. ಮಹಿಳೆಯರು ಒಳ ಉಡುಪುಗಳಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದರು. ಒಳಉಡುಪಿನಲ್ಲಿ ಏನೂ ತಿಳಿಯದಂತೆ ಚಿನ್ನವನ್ನು ಹೊಲಿಯಲಾಗಿತ್ತು. ಮಹಿಳೆಯರಿಂದ ರೂ.3.3 ಕೋಟಿ ಮೌಲ್ಯದ 5.2 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಆರ್‌ಐ ಉನ್ನತಾಧಿಕಾರಿಗಳು ಹೇಳಿದ್ದಾರೆ.

ಉತ್ತಮ ವೇತನ ನೀಡುವ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ ಕೆಲವರು ಕೆಲ ತಿಂಗಳ ಹಿಂದಷ್ಟೇ ಚೆನ್ನೈ ಮೂವರು ಮಹಿಳೆಯರನ್ನು ದುಬೈಗೆ ಕರೆಸಿಕೊಂಡಿದ್ದಾರೆ. ಅಲ್ಲಿಗೆ ಹೋದ ಮಹಿಳೆಯರಿಗೆ ಕೆಲಸವಿಲ್ಲ ಎಂಬುದು ತಿಳಿದುಬಂದಿದೆ. ಬಳಿಕ ಚಿನ್ನವನ್ನು ಕಳ್ಳಸಾಗಣೆ ಮಾಡಿದರೆ ಮಾತ್ರವೇ ಭಾರತಕ್ಕೆ ಹಿಂದಿರುಗಿಸಲಾಗುವುದು ಎಂದು ಬೆದರಿಸಿದ್ದಾರೆ. ಹೀಗಾಗಿ ಮಹಿಳೆಯರು ಒಪ್ಪಿಕೊಂಡಿದ್ದಾರೆಂದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ತಿಳಿಸಿದ್ದಾರೆ.

ಮೂವರ ಟಿಕೆಟ್ ಗಳನ್ನು ಒಟ್ಟಿಗೆ ಬುಕ್ ಮಾಡಲಾಗಿದೆ. ಆದರೆ, ವಿಮಾನದಲ್ಲಿ ಪ್ರತ್ಯೇಕ ಆಸನದಲ್ಲಿ ಕುಳಿತುಕೊಂಡಿದ್ದಾರೆ. ಇದು ದೊಡ್ಡ ದಂಧೆಯಂತೆ ಕಾಣುತ್ತಿದೆ. ವಂಚಕರು ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಕಸ್ಟಮ್ಸ್ ಆಕ್ಟ್ 1962 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT