ರಾಜ್ಯ

ಬೆಂಗಳೂರು: ಪೊಲೀಸರ ಸಮ್ಮುಖದಲ್ಲೇ ಸೀಜ್ ಮಾಡಿದ್ದ ಬೈಕ್ ಕಳ್ಳತನ!

Shilpa D

ಬೆಂಗಳೂರು: ನೆಕ್ಸಸ್ ಮಾಲ್ ಬಳಿಯ ಹೊಸೂರು-ಲಷ್ಕರ್ ರಸ್ತೆಯ ಸಂಚಾರ ಠಾಣೆ ಪಕ್ಕದ ಆಡುಗೋಡಿ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಸೀಜ್ ಮಾಡಿ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ.

ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಬಳಿ ಬೈಕ್ ಸವಾರ ಅಪಘಾತಕ್ಕೀಡಾಗಿದ್ದ. ಮೆಡಿಕೋ-ಲೀಗಲ್ ಪ್ರಕರಣವಾಗಿದ್ದರಿಂದ ಆಡುಗೋಡಿ ಸಂಚಾರಿ ಪೊಲೀಸರು ಬೈಕ್ ತಂದು ಪೊಲೀಸ್ ಕ್ವಾರ್ಟರ್ಸ್ ಪಕ್ಕದ ಕಟ್ಟಡದ ಒಳಗೆ ನಿಲ್ಲಿಸಿದ್ದರು.

ಸಂಚಾರಿ ಪೊಲೀಸರು ಬೈಕ್‌ಗೆ ವೀಲ್‌ ಕ್ಲಾಂಪ್‌ ಕೂಡ ಹಾಕಿದ್ದರು. ಪೊಲೀಸರು ಇದ್ದರೂ ದುಷ್ಕರ್ಮಿಗಳು ವೀಲ್ ಕ್ಲ್ಯಾಂಪ್ ಕಟ್ ಮಾಡಿ ಆವರಣದಲ್ಲಿದ್ದ ಬೈಕ್ ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಆಡುಗೋಡಿ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಮಂಗಳವಾರ ಆಡುಗೋಡಿ ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೈಕ್ ಧೀರಜ್ ಸಹಾಯ್ (41) ಎಂಬುವರಿಗೆ ಸೇರಿದ್ದಾಗಿದೆ. ಸೆಪ್ಟೆಂಬರ್ 15 ರಂದು ರಾತ್ರಿ 7.30 ರ ಸುಮಾರಿಗೆ ಕೋರಮಂಗಲದ ಬಿಡಿಎ ಕಾಂಪ್ಲೆಕ್ಸ್ ಕಡೆಗೆ  ಸಂಚರಿಸುತ್ತಿದ್ದ ವೇಳೆ  ಅಪಘಾತಕ್ಕೀಡಾಗಿ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬೈಕ್ ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದು, 1998ರ ಮಾಡೆಲ್ ಆಗಿದ್ದು, ಸುಮಾರು 10,000 ರೂ. ಬೆಲೆ ಬಾಳುವಂತದ್ದಾಗಿತ್ತು. ಅಪಘಾತವಾದ ನಂತರ ಆಡುಗೋಡಿ ಸಂಚಾರ ಪೊಲೀಸರು ವೀರಯೋಧರ ಪಾರ್ಕ್ ಬಳಿ ಅಪಘಾತ ಸ್ಥಳದಿಂದ ಬೈಕ್  ಸ್ಥಳಾಂತರಿಸಿದರು.

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ತನಗೆ ಸಮಸ್ಯೆಯಾಗಬಹುದೆಂಬ ಭಯದಿಂದ ಸವಾರ ತನ್ನ ಬೈಕ ಪಡೆಯದೆ ಪರಾರಿಯಾಗಿದ್ದಾನೆ. ಠಾಣೆಯ ಆವರಣದೊಳಗೆ ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲದ ಕಾರಣ ಸಂಚಾರಿ ಪೊಲೀಸರು ಪೊಲೀಸ್ ಕ್ವಾರ್ಟರ್ಸ್ ಒಳಗೆ ಬೈಕ್ ನಿಲ್ಲಿಸಿದ್ದರು.

ಮೇಲಾಗಿ ಟ್ರಾಫಿಕ್ ಪೊಲೀಸ್ ಠಾಣೆಯು ಮುಖ್ಯರಸ್ತೆಯಲ್ಲಿದ್ದು, ಪೊಲೀಸ್ ಕ್ವಾರ್ಟರ್ಸ್‌ನಲ್ಲಿ ಅಂತಹ ಎಲ್ಲಾ ವಾಹನಗಳನ್ನು ನಿಲ್ಲಿಸುತ್ತಾರೆ. ನಾವು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪರಿಚಿತ ಬೈಕ್ ಲಿಫ್ಟರ್‌ಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 379 ರ ಅಡಿಯಲ್ಲಿ ಕಳ್ಳತನದ ಪ್ರಕರಣ ದಾಖಲಿಸಲಾಗಿದೆ.

SCROLL FOR NEXT