ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಗೋವು ಕಳ್ಳಸಾಗಣೆದಾರರೊಂದಿಗೆ ಕೈಜೋಡಿಸಿದೆ ಮತ್ತು ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣೆ ಕಾಯಿದೆ 2020 ರ ನಿಬಂಧನೆಗಳನ್ನು ಉಲ್ಲಂಘಿಸುವಲ್ಲಿ ಅವರಿಗೆ ಸಹಾಯ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಸಿಟಿ ರವಿ ಅವರು ಭಾನುವಾರ ಆರೋಪಿಸಿದ್ದಾರೆ.
ನಗರದ ಐಬಿ ವೃತ್ತದಲ್ಲಿ ಆಂಧ್ರಪ್ರದೇಶದ ಹಿಂದೂಪುರ ಕಡೆಯಿಂದ ಗೌರಿಬಿದನೂರು-ದೊಡ್ಡಬಳ್ಳಾಪುರ ಮಾರ್ಗವಾಗಿ ಬೆಂಗಳೂರಿನ ಶಿವಾಜಿನಗರಕ್ಕೆ ಗೋಮಾಂಸ ಸಾಗಾಟ ಮಾಡಲಾಗುತ್ತಿತ್ತು. ಅತಿ ವೇಗದಿಂದ ಕಾರು ತಡೆದಾಗ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕಾರು ತಡೆ ಹಿಡಿದ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಕಾರಿನ ಗಾಜು ಪುಡಿಪುಡಿ ಮಾಡಿ ಕಾರಿನಲ್ಲಿದ್ದ ರಾಶಿ ರಾಶಿ ಮಾಂಸವನ್ನು ರಸ್ತೆಗೆ ಸುರಿದು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ: ದೇವನಹಳ್ಳಿ: ಗೋಮಾಂಸ ಸಾಗಾಟ ತಡೆದು ಕಾರಿಗೆ ಬೆಂಕಿ; ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸರ ವಶಕ್ಕೆ, ಬಿಗಿ ಬಂದೋಬಸ್ತ್
ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಟಿ ರವಿಯವರು ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಅಲ್ಲದೆ, ದೊಡ್ಡಬಳ್ಳಾಪುರ ಪೊಲೀಸರು ರಾಜ್ಯಕ್ಕೆ ಭಾರಿ ಪ್ರಮಾಣದ ಗೋಮಾಂಸವನ್ನು ಕಳ್ಳಸಾಗಣೆ ಮಾಡುತ್ತಿದ್ದವರ ಬದಲಿಗೆ ಹಿಂದೂ ಕಾರ್ಯಕರ್ತರನ್ನು ಬಂಧಿಸಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ಜನಾದೇಶವನ್ನು ದುರುಪಯೋಗಪಡಿಸಿಕೊಳ್ಳುವ ರೀತಿ ನೋಡಿ ನನಗೆ ತೀವ್ರ ನೋವಾಗಿದೆ. ನಮ್ಮ ನಾಡಿನಲ್ಲಿ ಗೋವುಗಳನ್ನು ನಮ್ಮ ತಾಯಿಯಂತೆ ಪೂಜಿಸಲಾಗುತ್ತಿದೆ. ಗೋವುಗಳ ಕಡಿಯುವವರಿಗೆ ಕಾಂಗ್ರೆಸ್ ಸಹಾಯ ಮಾಡುತ್ತಿದ್ದು, ಈ ಮೂಲಕ ಅವರ ಪಾಪದ ಕೊಡ ತುಂಬುತ್ತಿದೆ. ಈಗಿರುವ ಗೋಹತ್ಯೆ ವಿರೋಧಿ ಕಾನೂನನ್ನು ರದ್ದುಪಡಿಸುವುದಾಗಿ ಆಡಳಿತಾರೂಢ ಕಾಂಗ್ರೆಸ್ ಚುನಾವಣೆಗೂ ಮುನ್ನವೇ ಸ್ಪಷ್ಟಪಡಿಸಿತ್ತು ಎಂದು ಹೇಳಿದರು.